ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಪ್ರತಿಭಟನೆಗೆ ಬಂದ ನಟಿ ಭಾವನಾಗೆ ಚೇರ್ ಸಿಗದೇ ಪರದಾಡಿದರು, ಅಲ್ಲದೇ ಕಾರ್ಯಕರ್ತರೊಬ್ಬರು ಭಾವನಾ ಅವರಿಗೆ ತೆಗೆದುಕೊಂಡಿದ್ದಾರೆ. ಇದರಿಂದ ಭಾವನಾಗೆ ಮುಜುಗರ ಅನುಭವಿಸಿದ್ದಾರೆ.
ಬೆಂಗಳೂರು, (ಜುಲೈ.26): ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಇಡಿ ವಿಚಾರಣೆ ಖಂಡಿಸಿ ಬೆಂಗಳೂರಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಂಗಳವಾರ ಮೌನ ಪ್ರತಿಭಟನೆ ಮಾಡಿತು. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದ ನಟಿ ಭಾವನಾ ಕುಳಿತುಕೊಳ್ಳಲು ಚೇರ್‌ಗಾಗಿ ಪರದಾಡಿರುವ ಪ್ರಸಂಗ ನಡೆಯಿತು.
ಹೌದು..ರೇಸ್‌ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಇಂದು(ಮಂಗಳವಾರ) ನಾಯಕರು ನಡೆಸುತ್ತಿದ್ದ ಮೌನ ಪ್ರತಿಭಟನೆಗೆ ಭಾವನಾ ಆಗಮಿಸಿದರು. ಈ ವೇಳೆ ಭಾವನಾ ಚೇರ್‌ಗಾಗಿ ಪರದಾಡಿದರು. ಕೊನೆಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್ ಮಧ್ಯೆ ಡಿಕೆಶಿಗೆ ಮೀಸಲಿಟ್ಟಿದ್ದ ಚೇರ್‌ನಲ್ಲಿ ಕುಳಿತುಕೊಳ್ಳಲು ಹೋದರು. ಬಳಿಕ ಕಾರ್ಯಕರ್ತರು ಓಯ್ ಎಂದು ಜೋರಾಗಿ ಕೂಗಿದ್ದಾರೆ.
'ಬಿಜೆಪಿಗೆ ಹೋಗಿದ್ರಿ ಈಗ ಬಂದಿದ್ದೀರಾ? ಮುಂದೆ ಬಂದು ಕೂರೋದಕ್ಕೆ ಹೋಗ್ತೀರಾ? ನಟಿ ಭಾವನಾಗೆ ತರಾಟೆ
ಅಲ್ಲದೇ ಬಿಕೆ ಹರಿಪ್ರಸಾದ್ ಡಿಕೆ ಶಿವಕುಮಾರ್ ಅವರ ಚೇರ್ ಎಂದು ಭಾವನಾ ಕಿವಿಯಲ್ಲಿ ಹೇಳಿದ್ದಾರೆ. ಬಳಿಕ ಎಚ್ಚೆತ್ತ ಭಾವನಾ ಅಲ್ಲಿಂದ ಎದ್ದು ನಿಂತುಕೊಂಡು ಬಿಟ್ರು. ಇದೇ ವೇಳೆ ಡಿಕೆಶಿ ಕುರ್ಚಿಪಕ್ಕದಲ್ಲಿ ಕುಳಿತುಕೊಳ್ಳಲು ಹೋಗಿದ್ದ ಭಾವನಾಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತೆಯೊಬ್ಬರು, 'ನೀವು ಬಿಜೆಪಿಯಲ್ಲಿದ್ರಿ ತಾನೇ? ಇವಾಗ ಇಲ್ಲಿಗೆ ಬಂದು ಅಧ್ಯಕ್ಷರ ಪಕ್ಕದಲ್ಲಿ ಕೂರೋಕೆ ಹೋಗ್ತಿದ್ದೀರಲ್ಲಾ?' ಎಂದು ತರಾಟೆಗೆ ತೆಗೆದುಕೊಂಡರು.
ಇದರಿಂದ ಗಲಿಬಿಲಿಯಾಗಿ ಸಮಾಧಾನ ಮಾಡಲು ಮುಂದಾದ ನಟಿ ಭಾವನಾ ಮುಜುಗರಕ್ಕೆ ಒಳಗಾಗಿ ಪ್ರತಿಭಟನಾ ವೇದಿಕೆ ಮುಂಭಾಗದಿಂದ ಸೈಡ್ಗೆ ಹೋಗಿ ನಿಂತರು. ಸುಮಾರು ನಾಲ್ಕೈದು ನಿಮಿಷ ಹಾಗೇ ನಿಂತಿದ್ದ ಭಾವನಾಗೆ ಕೊನೆಗೆ ಕಾರ್ಯಕರ್ತರು ಚೇರ್ ವ್ಯವಸ್ಥೆ ಮಾಡಿಕೊಟ್ಟರು.
ಭಾವನಾ ಪ್ರತಿಕ್ರಿಯಿಸಿದ್ದು ಹೀಗೆ
ಕಾರ್ಯಕರ್ತರೊಬ್ಬರು ತರಾಟೆಗೆ ತೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಭಾವನಾ, ನಾನು ಕಾಂಗ್ರೆಸ್ ತೊರೆದು ಹೋಗಿದ್ದಕ್ಕೆ ಪಶ್ಚಾತ್ತಾಪ ಉಂಟಾಯಿತು. ಕೆಲವೊಂದು ಕಾರಣದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೆ. ಕಳೆದ ನಾಲ್ಕು ತಿಂಗಳ ಹಿಂದೆ ಸುರ್ಜೇವಾಲ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದೇನೆ. ಅದಾದ ಬಳಿಕ ಸೇರ್ಪಡೆ ಬಗ್ಗೆ ಎಲ್ಲೂ ಸುದ್ದಿ ಆಗಿರಲಿಲ್ಲ. ಹಾಗಾಗಿ ಕಾರ್ಯಕರ್ತರಿಗೆ ಸರಿಯಾದ ಮಾಹಿತಿ ತಿಳಿದಿಲ್ಲ. ಆದ್ದರಿಂದ ಕಾರ್ಯಕರ್ತರ ಜೊತೆ ಆದ ಘಟನೆ ಸ್ವಾಭಾವಿಕ. ಬಳಿಕ ನಾನು ಸೇರ್ಪಡೆ ಆಗಿರುವ ಬಗ್ಗೆ ಫೋಟೋ ತೋರಿಸಿ ತಿಳಿಸಿದೆ ಯಾವುದೇ ಸ್ಥಾನ-ಮಾನದ ನೀರಿಕ್ಷೆ ನನಗೆ ಇಲ್ಲ. ಸಿದ್ಧಾಂತದ ಆಧಾರದ ಮೇಲೆ ಕಾಂಗ್ರೆಸ್ನಲ್ಲಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
