ಮಡಿಕೇರಿ: ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ಗೆ ಟಿಕೆಟ್ ತಪ್ಪಿದ್ರೆ ಪಕ್ಷಕ್ಕೆ ರಾಜೀನಾಮೆ, ಕಾರ್ಯಕರ್ತರ ಎಚ್ಚರಿಕೆ
ಬಿಜೆಪಿ ಕೊಡಗಿನ ಎರಡು ಕ್ಷೇತ್ರಗಳಿಗೆ ಇನ್ನು ಟಿಕೆಟ್ ಘೋಷಿಸಿಲ್ಲವಾದರೂ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಏ.05): ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ಸಿಗುವುದು ಡೌಟ್ ಎಂದು ಬಿಜೆಪಿ ರಾಜ್ಯ ಕೋರ್ ಕಮಿಟಿಯಲ್ಲಿ ಆಗಿರುವ ಚರ್ಚೆ ಬಹಿರಂಗ ಆಗುತ್ತಿದ್ದಂತೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಬೆಂಬಲಿಗರು ಆಕ್ರೋಶ ಹೊರ ಹಾಕಲು ಆರಂಭಿಸಿದ್ದಾರೆ. ಕುಶಾಲನಗರ ತಾಲ್ಲೂಕಿನ ತೊರೆನೂರು ಸೇರಿದಂತೆ ಹಲವು ಶಕ್ತಿ ಕೇಂದ್ರಗಳ ಪ್ರಮುಖರು ತಮ್ಮ ಸ್ಥಾನಗಳಿಗೆ ಕಾರ್ಯಕರ್ತರ ಜೊತೆಗೆ ರಾಜೀನಾಮೆ ಸಲ್ಲಿಸಿ ಪಕ್ಷ ಬಿಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತೊರೆನೂರಿನಲ್ಲಿ ಜಮಾಯಿಸಿದ ಶಕ್ತಿ ಕೇಂದ್ರದ ಪ್ರಮುಖರು, ಶಾಸಕ ಅಪ್ಪಚ್ಚು ರಂಜನ್ ಅವರ ಭಾವಚಿತ್ರ ಹಿಡಿದು, ಪಕ್ಷದ ಭಾವುಟ ಹಿಡಿದು ಅವರ ಪರವಾಗಿ ಘೋಷಣೆ ಕೂಗಿದರು. ಜೊತೆಗೆ ಬಿಜೆಪಿ ಪಕ್ಷ ಮತ್ತು ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಘೋಷಣೆ ಕೂಗಿ ಅಪ್ಪಚ್ಚು ರಂಜನ್ ಅವರಿಗೆ ಮತ್ತೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ಕೊಡದಿದ್ದರೆ ಪಕ್ಷಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
KODAGU: ಅತ್ಯಂತ ಕಡಿಮೆ ಅಳತೆಯ ನಿವೇಶನದ ಹಕ್ಕುಪತ್ರ ವಿತರಣೆಗೆ ಜನರ ಆಕ್ರೋಶ: ಅಹೋರಾತ್ರಿ ಪ್ರತಿಭಟನೆ
ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖ್ ಮಹೇಶ್ ಮಾತನಾಡಿ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ಕೊಡದಿದ್ದರೆ, ಪ್ರಮುಖ್ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಿ ವ್ಯವಸಾಯ ಮಾಡಿಕೊಂಡು ಇರುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಮಾತನಾಡಿ ಕಳೆದ ಐದು ಬಾರಿಯಿಂದ ಅಪ್ಪಚ್ಚು ರಂಜನ್ ಅವರು ಗೆದ್ದು, ಕೆಲವೇ ತಿಂಗಳು ಮಾತ್ರವೇ ಸಚಿವರಾಗಿದ್ದರು. ಆ ಅವಧಿಯಲ್ಲೇ ರಂಜನ್ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಅವರಿಗೆ ಟಿಕೆಟ್ ಕೊಟ್ಟಲ್ಲಿ ಸುಲಭವಾಗಿ ಬಿಜೆಪಿ ಗೆಲುವು ಸಾಧಿಸಲಿದೆ. ಒಂದು ವೇಳೆ ಭಾರತೀಶ್ ಅವರಿಗೆ ಟಿಕೆಟ್ ಕೊಟ್ಟಲ್ಲಿ ಪಕ್ಷ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ. ಗೆದ್ದರೂ ಭಾರತೀಶ್ ಅವರಿಗೆ ಸಚಿವಸ್ಥಾನ ಸಿಗುವುದಿಲ್ಲ. ಇದರಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃಧ್ಧಿ ಆಗಲು ಸಾಧ್ಯವಿಲ್ಲ. ಆದ್ದರಿಂದ ಭಾರತೀಶ್ ಅವರಿಗೆ ಟಿಕೆಟ್ ಕೊಡುವ ಬದಲು ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ಭಾರತೀಶ್ ಅವರಿಗೆ ಇನ್ನೂ ವಯಸ್ಸಿದೆ, ಅವರಿಗೆ ಮುಂದೆ ಟಿಕೆಟ್ ಕೊಡಲು ಅವಕಾಶ ಇದೆ. ಅಪ್ಪಚ್ಚು ರಂಜನ್ ಅವರಿಗೆ ಅವರಿಗೆ ಈಗಾಗಲೇ ವಯಸ್ಸಾಗಿರುವುದರಿಂದ ಈಗ ಟಿಕೆಟ್ ತಪ್ಪಿದರೆ ಮುಂದೆಯೂ ಇನ್ನು ಅವಕಾಶಗಳೇ ಇಲ್ಲದಂತೆ ಆಗುತ್ತದೆ. ಆದ್ದರಿಂದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಭಾರತೀಶ್ ಅವರಿಗೆ ಟಿಕೆಟ್ ಣೀಡಿದರೆ ಮತಗಳು ವಿಭಜನೆ ಆಗುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಭಾರತೀಶ್ ಅವರಿಗೆ ಟಿಕೆಟ್ ನೀಡಿದರೆ ನಾವು ಸಪೋರ್ಟ್ ಮಾಡುವುದಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ. ಅಲ್ಲದೆ ಭಾರತೀಶ್ ಅವರಿಗೆ ಟಿಕೆಟ್ ನೀಡಿದರೆ ಯುವಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಅವರ ಪರವಾಗಿ ಮತ ಚಲಾಯಿಸುವ ಸಾಧ್ಯತೆ ಇದೆ.
ಪೇಸ್‌ಬುಕ್‌ನಲ್ಲಿ ಪ್ರಚಾರ: ಬಿಜೆಪಿ ಶಾಸಕ ಬೋಪಯ್ಯ ನೋಟಿಸ್
ಇದೆಲ್ಲವೂ ಕಾಂಗ್ರೆಸ್‌ಗೆ ಅನುಕೂಲ ಆಗಲಿದ್ದು ಬಿಜೆಪಿ ಸೋಲಿಗೆ ಕಾರಣವಾಗಬಹುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಕೊಡಗಿನ ಎರಡು ಕ್ಷೇತ್ರಗಳಿಗೆ ಇನ್ನು ಟಿಕೆಟ್ ಘೋಷಿಸಿಲ್ಲವಾದರೂ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚು ರಂಜನ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.