ಚಿಕ್ಕಮಗಳೂರು: ಪರಕೆಯಲ್ಲಿ ಗುಡಿಸುವ ಮೂಲಕ ಭ್ರಷ್ಟ ಮುಕ್ತ ಆಡಳಿತಕ್ಕೆ ಎಎಪಿ ಚಾಲನೆ
ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಚಾರ ಆಡಳಿತ ತೊಲಗಿಸುವ ದೃಷ್ಟಿಯಿಂದ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ನಂತರ ರಸ್ತೆಯನ್ನು ಪರಕೆಯಲ್ಲಿ ಗುಡಿಸುವ ಮೂಲಕ ಭ್ರಷ್ಟ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದ ಆದ್ಮಿ ಪಕ್ಷದ ಕಾರ್ಯಕರ್ತರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.23): ರಾಜ್ಯದಲ್ಲಿ ಭ್ರಷ್ಟಚಾರ ಹೆಚ್ಚಾಗಿದೆ ಎಂದು ಆರೋಪಿಸಿ ಚಿಕ್ಕಮಗಳೂರು ಜಲ್ಲಾ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪರಕೆ ಹಿಡಿದು ಕಸ ಗುಡಿಸುವ ಮೂಲಕ ಭ್ರಷ್ಟ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದರು. ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಚಾರ ಆಡಳಿತ ತೊಲಗಿಸುವ ದೃಷ್ಟಿಯಿಂದ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ನಂತರ ರಸ್ತೆಯನ್ನು ಪರಕೆಯಲ್ಲಿ ಗುಡಿಸುವ ಮೂಲಕ ಭ್ರಷ್ಟ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದರು.
ತೆರಿಗೆ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು
ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಡಾ ಕೆ.ಸುಂದರಗೌಡ ಸರ್ಕಾರವು ಇಂದು ಸಾರ್ವಜನಿಕರ ತೆರಿಗೆಯನ್ನು ಹೆಚ್ಚಿಸುವ ಮೂಲಕ ಭ್ರಷ್ಟಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡು ಶೇ.40 ರಷ್ಟು ಕಮೀಷನ್ ಪಡೆಯುವ ಮೂಲಕ ಹಿಂದೇಂದು ಕಾಣದ ರೀತಿಯಲ್ಲಿ ಭಾರೀ ಭ್ರಷ್ಟಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.ರೈತ ಸಮೂಹಕ್ಕೆ ಯಾವುದೇ ಯೋಜನೆಗಳನ್ನು ನೀಡದ ಪರಿಣಾಮ ಕಳೆದ ಮೂರು ವರ್ಷಗಳಿಂದ ಇಲ್ಲಿ ಯವರೆಗೂ ಸುಮಾರು ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಮೆಗೆ ಶರಣಾಗಿ ಜೀವ ಕಳೆದುಕೊಂಡಿದ್ದಾರೆ. ಇದುವರೆಗೂ ಆ ಕುಟುಂಬಗಳಿಗೆ ಸರ್ಕಾರ ಪರಿಹಾರವು ಘೋಷಣೆ ಮಾಡದೇ ಅಸಡ್ಡೆ ವಹಿಸುತ್ತಿದೆ ಆರೋಪಿಸಿದ ಅವರು ಮುಂದಿನ ದಿನಗಳಲ್ಲಿ ರೈತಾಪಿ ವರ್ಗವನ್ನು ಸರ್ಕಾರಗಳು ಕಡೆಗಣಿಸಿದರೆ ದೇಶದ ಬೆನ್ನಲುಬು ಕಳಚಿದಂತಾಗುತ್ತದೆ ಎಂದರು.ಸಾರ್ವಜನಿಕರು ಎಚ್ಚೆತ್ತುಕೊಂಡು ಭ್ರಷ್ಟಮುಕ್ತ ಭಾರತ ನಿರ್ಮಾಣ ಮಾಡಲು ಪಣತೊಡ ಬೇಕು. ದೆಹಲಿ ಮಾದರಿಯ ಸಾರ್ವಜನಿಕರ ತೆರಿಗೆ ಹಣವನ್ನು ಸಾರ್ವಜನಿಕರ ಅಭಿವೃದ್ದಿಗೆ ಬಳಸಿದಂತೆ ರಾಜ್ಯದಲ್ಲೂ ಆ ರೀತಿಯ ಆಡಳಿತ ನಡೆಸಲು ಎಎಪಿಗೆ ಸಂಪೂರ್ಣ ಬೆಂಬಲ ಸೂಚಿಸಬೇಕು ಎಂದು ಆಗ್ರಹಿಸಿದರು.
KARNATAKA ELECTION 2023: ಚಿಕ್ಕಮಗಳೂರಿನಲ್ಲಿ ಒಂದೇ ದಿನ ಬಿಜೆಪಿ- ಕಾಂಗ್ರೆಸ್ ಬೈಕ್ RALLY!
ಜಿಲ್ಲೆಯಲ್ಲಿ ಭಾರೀ ಭ್ರಷ್ಟಚಾರದ ಆರೋಪ
ಎಎಪಿ ಜಿಲ್ಲಾಧ್ಯಕ್ಷ ಹೇಮಂತ್ ಮಾತನಾಡಿ ಜಿಲ್ಲೆಯಲ್ಲಿ ನಗರಸಭೆ, ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಭಾರೀ ಭ್ರಷ್ಟಚಾರದಲ್ಲಿ ತೊಡಗಿದ್ದು ಇವುಗಳಿಂದ ಸಾರ್ವಜನಿಕರು ಮುಕ್ತರಾಗಬೇಕಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪಕ್ಷವನ್ನು ಬೆಂಬಲಿಸಬೇಕು ಎಂದರು.ಜಿಲ್ಲೆಯ ಜನಪ್ರತಿನಿಧಿಗಳು ಎಲ್ಲೆಂದರಲ್ಲಿ ಆಸ್ತಿ ಗಳಿಸುವ ಮೂಲಕ ಜನಸಾಮಾನ್ಯರನ್ನು ಇನ್ನಷ್ಟು ಬಡವರ ನ್ನಾಗಿ ಮಾಡುತ್ತಿದ್ದಾರೆ. ಇವುಗಳನ್ನು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸಿ ಮುಂದಿನ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯನ್ನು ಬೆಂಬಲಿಸಿದರೆ ದೆಹಲಿ ಮಾದರಿಯ ಆಡಳಿತವನ್ನು ನಮ್ಮ ರಾಜ್ಯದಲ್ಲಿ ಅನುಷ್ಟಾನಕ್ಕೆ ತರಲು ಸಾಧ್ಯ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಸೈಯದ್ ಜಮೀಲ್ ಅಹ್ಮದ್, ಎಂ.ಪಿ.ಈರೇಗೌಡ, ಮತ್ತಿತರರು ಹಾಜರಿದ್ದರು.