* ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಗೆ ಕೇಜ್ರಿವಾಲ್‌ ಪಕ್ಷದ ತಂತ್ರ* ಮುಖ್ಯಮಂತ್ರಿ ಚಂದ್ರು 2 ದಿನದಲ್ಲಿ, ಬ್ರಿಜೇಶ್‌ ಮಾಸಾಂತ್ಯಕ್ಕೆ ಆಪ್‌ಗೆ* ಕಾಂಗ್ರೆಸ್‌ನ ಮೂವರಿಗೆ ಆಪ್‌ ಗಾಳ* ಬಿ.ಎಲ್‌.ಶಂಕರ್‌, ಸುದರ್ಶನ್‌, ಕಿಮ್ಮನೆ ಸೆಳೆಯಲು ಯತ್ನ

ವಿಜಯ್‌ ಮಲಗಿಹಾಳ

ಬೆಂಗಳೂರು(ಜೂ.06): ದೆಹಲಿ, ಪಂಜಾಬ್‌ ಬಳಿಕ ಕರ್ನಾಟಕದಲ್ಲೂ ತನ್ನ ಸಂಘಟನೆ ಬಲಪಡಿಸಿಕೊಳ್ಳುವತ್ತ ಗಮನ ಹರಿಸಿರುವ ಆಮ್‌ ಆದ್ಮಿ ಪಕ್ಷ, ಕಾಂಗ್ರೆಸ್‌ನ ಹಿರಿಯ ಮುಖಂಡರನ್ನು ಸೆಳೆಯಲು ಮುಂದಾಗಿದೆ.

ಸಜ್ಜನ ರಾಜಕಾರಣಿಗಳು ಎಂಬ ಹೆಸರು ಗಳಿಸಿರುವ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ ಕಿಮ್ಮನೆ ರತ್ನಾಕರ, ವಿಧಾನಪರಿಷತ್ತಿನ ಮಾಜಿ ಸಭಾಪತಿಗಳಾದ ಬಿ.ಎಲ್‌.ಶಂಕರ್‌ ಹಾಗೂ ವಿ.ಆರ್‌.ಸುದರ್ಶನ್‌ ಅವರನ್ನು ಆಮ್‌ ಆದ್ಮಿ ಪಕ್ಷಕ್ಕೆ ಕರೆತರುವ ಸಂಬಂಧ ಸದ್ದಿಲ್ಲದೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಎರೆಡರಡು ಸುತ್ತಿನ ಮಾತುಕತೆ ನಡೆದಿದೆ. ಶೀಘ್ರದಲ್ಲಿಯೇ ಈ ಮೂವರು ತಮ್ಮ ಅಂತಿಮ ನಿರ್ಧಾರ ತಿಳಿಸುವ ನಿರೀಕ್ಷೆಯಿದೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.

ಚಂದ್ರು ಶೀಘ್ರ ಆಪ್‌ಗೆ:

ಕಾಂಗ್ರೆಸ್‌ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೇಸರಗೊಂಡು ಇತ್ತೀಚೆಗಷ್ಟೇ ವಿಧಾನಪರಿಷತ್ತಿನ ಮಾಜಿ ಸದಸ್ಯ ಮುಖ್ಯಮಂತ್ರಿ ಚಂದ್ರು ಹಾಗೂ ರಾಷ್ಟ್ರೀಯ ವಕ್ತಾರ ಬ್ರಿಜೇಶ್‌ ಕಾಳಪ್ಪ ಅವರು ರಾಜೀನಾಮೆ ನೀಡಿ ಹೊರಬಂದಿದ್ದರು. ಅವರಿಬ್ಬರೂ ಆಮ್‌ ಆದ್ಮಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಚಂದ್ರು ಅವರು ಇನ್ನೆರಡು ದಿನಗಳಲ್ಲಿ ಸೇರಲಿದ್ದರೆ, ಬ್ರಿಜೇಶ್‌ ಅವರು ತಿಂಗಳಾಂತ್ಯದೊಳಗೆ ಪಕ್ಷ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಇಮೇಜ್‌ಗೆ ಮಣೆ:

ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಹಾಗೂ ವರ್ಚಸ್ಸು ಹೊಂದಿರುವ ಮುಖಂಡರು ಪಕ್ಷದಲ್ಲಿರಬೇಕು. ಆ ಮುಖಂಡರೆಲ್ಲರೂ ಚುನಾವಣೆಯಿಂದ ಸ್ಪರ್ಧಿಸಬೇಕು ಎಂದೇನೂ ಇಲ್ಲ. ಆದರೆ, ಅವರು ಪಕ್ಷಕ್ಕೆ ಒಳ್ಳೆಯ ಇಮೇಜ್‌ ತಂದು ಕೊಡುವವರಾಗಿರಬೇಕು. ಪಕ್ಷದ ಪರ ಮತ ಚಲಾಯಿಸಲು ಪ್ರೇರಣೆ ನೀಡುವಂತವರಾಗಿರಬೇಕು. ಇದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಸಲಹೆಯನ್ನು ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರಿಗೆ ನೀಡಿದ್ದಾರೆ.

ಸತತ ಚರ್ಚೆ:

ಆ ಸಲಹೆ ಅನುಸಾರ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಎಂ.ಭಾಸ್ಕರರಾವ್‌ ಸೇರಿದಂತೆ ಹಲವು ಮುಖಂಡರು ಕಳೆದ ಹಲವು ದಿನಗಳಿಂದ ಅನ್ಯ ಪಕ್ಷಗಳ ಮುಖಂಡನ್ನು ಗುರುತಿಸಿ ಸತತ ಸಮಾಲೋಚನೆ ನಡೆಸಿದ್ದಾರೆ. ಇನ್ನು ಅನ್ಯ ಪಕ್ಷಗಳ ಕೆಲವು ಮುಖಂಡರು ತಾವಿರುವ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಸಿಗದಿರುವುದರಿಂದ ಬೇಸತ್ತು ಆಮ್‌ ಆದ್ಮಿ ಪಕ್ಷದ ಮುಖಂಡರೊಂದಿಗೆ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಆಮ್‌ ಆದ್ಮಿ ಪಕ್ಷದ ಮುಖಂಡರು ರಾಜ್ಯಾದ್ಯಂತ ಪಕ್ಷ ಸಂಘಟನೆ ಬಿರುಸುಗೊಳಿಸಿದ್ದಾರೆ. ಎಲ್ಲ ಜಿಲ್ಲೆಗಳಿಗೂ ಒಬ್ಬೊಬ್ಬ ರಾಜ್ಯ ಮುಖಂಡರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಆ ಉಸ್ತುವಾರಿಗಳು ಆಯಾ ಜಿಲ್ಲೆಯಲ್ಲಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುವವರೊಂದಿಗೆ ಮಾತುಕತೆ ನಡೆಸಿದ್ದಲ್ಲದೆ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಬಲಪಡಿಸಲು ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.