Raichur: ಸಿಂಧನೂರಿನ ಬಿಜೆಪಿ ಟಿಕೆಟ್‌ಗಾಗಿ 9 ಜನ ಆಕಾಂಕ್ಷಿಗಳು ಓಡಾಟ: ಟಿಕೆಟ್ ಘೋಷಣೆ ಮಾಡಲು ಹೈಕಮಾಂಡ್ ವಿಳಂಬ
ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿಲ್ಲ. ಆದ್ರೂ ಸಹ ಮತದಾರರ ಮನಸೆಳೆಯಲು ಎರಡು ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ಮಾ.04): ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿಲ್ಲ. ಆದ್ರೂ ಸಹ ಮತದಾರರ ಮನಸೆಳೆಯಲು ಎರಡು ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿಗಳು ಯಾರೆಂಬುದು ಇನ್ನೂ ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್ ತಿಳಿಸಿಲ್ಲ. ಆದ್ರೂ ಸ್ಥಳೀಯ ನಾಯಕರು ನನಗೆ ಟಿಕೆಟ್ ಸಿಗಬಹುದೆಂಬ ತಮ್ಮ ಪಕ್ಷದ ಚಿಹ್ನೆಯನ್ನು ಹಿಡಿದುಕೊಂಡು ಸಿಂಧನೂರು ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಅತೀ ಹೆಚ್ಚು ನೀರಾವರಿ ಮತ್ತು ವಾಣಿಜ್ಯ ಚಟುವಟಿಕೆಗಳು ಹೊಂದಿರುವ ಸಿಂಧನೂರು ಕ್ಷೇತ್ರದಲ್ಲಿ ಅಧಿಕಾರ ನಡೆಸಲು ಮೂರು ಪಕ್ಷಗಳ ಜೊತೆಗೆ ಇತರೆ ಪಕ್ಷಗಳ ನಾಯಕರು ನಾನಾ ರೀತಿಯ ಕಸರತ್ತು ಶುರು ಮಾಡಿದ್ದಾರೆ.
ಕೈ ಟಿಕೆಟ್‌ಗಾಗಿ ಮೂವರು ನಾಯಕರ ನಡುವೆ ಪೈಪೋಟಿ: ಸಿಂಧನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮತ್ತು ಬಸನಗೌಡ ಬಾದರ್ಲಿ ಹಾಗೂ ಕೆ.ಕರಿಯಪ್ಪ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಹಾಕುವ ಮುನ್ನವೇ ಮೂವರು ನಾಯಕರು ಕ್ಷೇತ್ರದಲ್ಲಿ ಓಡಾಟ ನಡೆಸಿದರು. ಈಗ ಟಿಕೆಟ್ ನನಗೆ ಸಿಗುತ್ತೆ ಎಂಬ ಭರವಸೆಯೊಂದಿಗೆ ಮೂರು ನಾಯಕರು ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಲ್ಲಿ ಗುರುತಿಸಿಕೊಂಡ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕೆ.ಕರಿಯಪ್ಪ ಇದ್ದು, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಆಪ್ತರಾದ ಬಸನಗೌಡ ಬಾದರ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತಬೇಟೆ ಶುರು ಮಾಡಿದ್ದಾರೆ. ರಾಜ್ಯ ಮಟ್ಟದ ಯಾವ ನಾಯಕರು ಸಿಂಧನೂರಿಗೆ ಬಂದ್ರೆ ಮೂವರು ನಾಯಕರು ಮೂರು ಸ್ಥಳದಲ್ಲಿ ತಮ್ಮ ಬೆಂಬಲಿಗರ ನೇತೃತ್ವದಲ್ಲಿ ಸ್ವಾಗತ ಕೋರುವುದು ವಿಶೇಷವಾಗಿದೆ. ಇತ್ತೀಚೆಗೆ ಕ್ಷೇತ್ರದಲ್ಲಿ ಹೊಸದೊಂದು ಟಾಕ್ ಶುರುವಾಗಿದೆ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಕೆ. ಕರಿಯಪ್ಪ ಬಿಜೆಪಿಗೆ ಹೋಗುತ್ತಾರೆ ಎಂಬ ಮಾತುಗಳು ಸಹ ಬಲವಾಗಿ ಕೇಳಿಬರುತ್ತಿವೆ.
ಎಲ್ಲೆಲ್ಲೋ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣ ನಮಗೇಕೆ? ಜಿಲ್ಲೆಯಲ್ಲೇ ಸಾಕಷ್ಟು ಹಗರಣಗಳಿವೆ: ಸುಮಲತಾ
ಬಿಜೆಪಿಯ ಒಂದು ಟಿಕೆಟ್ ಗಾಗಿ 9 ನಾಯಕರು ಓಡಾಟ: ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಘಟನೆ ಬಲವಾಗಿದೆ. ಆದ್ರೂ ಬಿಜೆಪಿ ಟಿಕೆಟ್ ಗಾಗಿ 9 ಜನ ನಾಯಕರು ಓಡಾಟ ಶುರು ಮಾಡಿದ್ದಾರೆ. ಇತ್ತೀಚಿಗೆ ಅಂದ್ರೆ ಮಸ್ಕಿ ಉಪ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಕೆ.ವಿರೂಪಾಕ್ಷಪ್ಪ, ಎನ್.ಶಿವನಗೌಡ ಗೊರೇಬಾಳ, ಕೊಲ್ಲಾ ಶೇಷರಾವ್, ರಾಜೇಶ ಹಿರೇಮಠ, ಅಮರೇಗೌಡ ವಿರುಪಾಪೂರ, ಆರ್. ಕೆ.ಹಿರೇಮಠ, ನಿರುಪಾದಪ್ಪ ಜೋಳದರಾಶಿ, ಶರಣಮ್ಮ ದೊಡ್ಡಬಸವರಾಜ ಹಾಗೂ ಆದಿಮನಿ ವೀರಲಕ್ಷ್ಮೀ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿ ಎಲ್ಲರೂ ಒಟ್ಟಿಗೆ ಇದ್ದರೂ ಒಬ್ಬೊಬ್ಬರು ತಮ್ಮದೇ ಸ್ಟೈಲ್ ನಲ್ಲಿ ಪ್ರತ್ಯೇಕವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಇಂದು ಒಬ್ಬ ನಾಯಕರು ಬಂದ್ರೆ ಮಾರನೇ ದಿನ ಮತ್ತೊಬ್ಬ ನಾಯಕರು ಬಂದು ನನಗೆ ಬೆಂಬಲಿಸಿವೆಂದು ಹೇಳುತ್ತಿದ್ದಾರೆ. ಹೀಗಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಕೈ ಮತ್ತು ಕಮಲ ಕಾರ್ಯಕರ್ತರಿಗೆ ಭಾರೀ ಬೇಸರ: ಸಿಂಧನೂರು ಕ್ಷೇತ್ರದಲ್ಲಿ ತನ್ನದೇ ಅಭಿವೃದ್ಧಿ ಕೆಲಸಗಳಿಂದ ಗುರುತಿಸಿಕೊಂಡ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಕ್ಷೇತ್ರದಲ್ಲಿ ಚಿರಪರಿಚಿತರು. ಇಡೀ ಕ್ಷೇತ್ರದ ಹಳ್ಳಿ- ಹಳ್ಳಿಯಲ್ಲಿ ಕಾರ್ಯಕರ್ತರು ಹೊಂದಿದ್ದಾರೆ. ಮತ್ತೊಂದು ಕಡೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಕ್ಷೇತ್ರದಲ್ಲಿ ನವ ಸಂಕಲ್ಪ ನವ ಸಿಂಧನೂರು ಹೆಸರಿನಲ್ಲಿ ಕ್ಷೇತ್ರದ ಜನರ ಮನಸೆಳೆಯಲು ಕಸರತ್ತು ನಡೆಸಿದ್ದಾರೆ. ಇನ್ನೊಂದು ಕಡೆ ಹಿಂದುಳಿದ ನಾಯಕ ಕೆ.ಕರಿಯಪ್ಪ ಕಳೆದ 10 ವರ್ಷಗಳಿಂದ ಸಿಂಧನೂರು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಮಾಡುತ್ತಾ ಜನರ ಮನಸೆಳೆದಿದ್ದಾರೆ. ಈಗ ಮೂವರು ನಾಯಕರು ಈ ಬಾರಿ ನನಗೆ ಟಿಕೆಟ್ ಸಿಗುವುದು ಪಕ್ಕಾ ಎಂದು ಹೇಳುತ್ತಾ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷದ ಬಾವುಟ ಹಿಡಿದು ಪಕ್ಷದಲ್ಲಿಯೇ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಾ ಪ್ರಚಾರ ಶುರು ಮಾಡಿದ್ದಾರೆ. ಇದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ ತರಿಸುತ್ತಿದೆ. ಮತ್ತೊಂದು ಕಡೆ ಬಿಜೆಪಿ ನಾಯಕರು ಸಹ ಪ್ರತ್ಯೇಕವಾಗಿ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಪಕ್ಷ ಸಂಘಟನೆ ಮತ್ತು ಸರ್ಕಾರದ ಸಾಧನೆಗಳು ತಿಳಿಸುತ್ತಾ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನ ಬಿಜೆಪಿಗೆ ಸೆಳೆಯಲು ನಾನಾ ಕಸರತ್ತು ನಡೆಸಿದ್ದಾರೆ.
ಜೆಡಿಎಸ್ ನಿಂದ ಶಾಸಕ ವೆಂಕಟರಾವ್ ನಾಡಗೌಡ ಮತ್ತೆ ಸ್ಪರ್ಧೆ: ಕಾಂಗ್ರೆಸ್ ಹಾಗೂ ಬಿಜೆಪಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿಗಳು ಯಾರೆಂಬುದು ಇನ್ನೂ ಘೋಷಣೆಯಾಗಿಲ್ಲ. ಆದ್ರೆ ಜೆಡಿಎಸ್ ಅಭ್ಯರ್ಥಿ ಶಾಸಕ ವೆಂಕಟರಾವ್ ನಾಡಗೌಡ ಈಗಾಗಲೇ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಹೀಗಾಗಿ ವೆಂಕಟರಾವ್ ನಾಡಗೌಡ ತಮ್ಮದೇ ಶೈಲಿಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ.
ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ
ಮೂರು ಪಕ್ಷ ಸೋಲಿಸಲು ಕಣಕ್ಕೆ ಇಳಿದ ಗಾಲಿ ಜನಾರ್ದನ ರೆಡ್ಡಿ: ಸಿಂಧನೂರು ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿಗ್ ಫೈಟ್ ಇದೆ. ಈ ಬಾರಿ ಕಮಲ ಅರಳಿಸಲು ಬಿಜೆಪಿ ನಾಯಕರು ನಾನಾ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಹೊಸದಾಗಿ ಸ್ಥಾಪಿಸಿದ ಕಲ್ಯಾಣ ಕರ್ನಾಟಕ ರಾಜ್ಯ ಪ್ರಗತಿ(ಕೆ.ಕೆ.ಆರ್.ಪಿ) ಪಕ್ಷದಿಂದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ನೆಕ್ಕಂಟಿಯನ್ನ ಕಣಕ್ಕೆ ಇಳಿಸಿದ್ದಾರೆ. ಇತ್ತ ಮಲ್ಲಿಕಾರ್ಜುನ ನೆಕ್ಕಂಟಿ ಪರ ಖುದ್ದು ಗಾಲಿ ಜನಾರ್ದನ ರೆಡ್ಡಿ ಸಿಂಧನೂರಿಗೆ ಆಗಮಿಸಿ ಬೇರೆ ಬೇರೆ ಪಕ್ಷದ ಕಾರ್ಯಕರ್ತರನ್ನ ತನ್ನ ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದ್ದಾರೆ. ಇದರ ಜೊತೆಗೆ ಆಪ್ ಪಕ್ಷದ ಅಧ್ಯಕ್ಷ ಸಂಗಮೇಶ ಕಿಲ್ಲೇದ್ ಈಗಾಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಕೆ.ಆರ್.ಎಸ್. ಅಭ್ಯರ್ಥಿ ಕೂಡ ಕ್ಷೇತ್ರದಲ್ಲಿ ತಿರುಗಾಟ ನಡೆಸಿದ್ದಾರೆ. ಇನ್ನಿತರರು ಸಹ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಮತದಾರರು ಮಾತ್ರ ಎಲ್ಲರಿಗೂ ಜೈ ಎನ್ನುತ್ತಾ ಎಲ್ಲರೂ ಹೇಳುವ ಮಾತುಗಳು ಕೇಳುತ್ತಾ ಇದ್ದಾರೆ.