ರಾಜ್ಯ ಕಾಂಗ್ರೆಸ್‌ ಮೇಲೆ ಹೈಕಮಾಂಡ್‌ ಹತೋಟಿ ಬಿಗಿ! ರಾಜ್ಯ ಬಿಜೆಪಿ ಗಪ್ ಚುಪ್! ಮೈತ್ರಿ ಅತೃಪ್ತರು ಸುಮ್ಮನಾಗುವ ಸಾಧ್ಯತೆ!

ಬೆಂಗಳೂರು, [ಡಿ.12]: ಪಂಚರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ದೊರಕಿರುವ ಮುನ್ನಡೆಯ ಪರಿಣಾಮ ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೆ ಸಕಾರಾತ್ಮಕವಾಗಿ ಬೀರುವುದರ ಜತೆಗೆ ಕಾಂಗ್ರೆಸ್‌ ಹೈಕಮಾಂಡ್‌ ಬಲಿಷ್ಠವಾಗುವ ಮೂಲಕ ರಾಜ್ಯ ನಾಯಕತ್ವದ ಮೇಲೆ ಹತೋಟಿ ಸಾಧಿಸಲು ಈ ಫಲಿತಾಂಶ ನೆರವಾಗಿದೆ.

ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಸರ್ಕಾರವನ್ನು ಕಾಡಿದ್ದು, ಕಾಂಗ್ರೆಸ್‌ನ ಅತೃಪ್ತ ಶಾಸಕರ ಗುಂಪು ಯಾವ ಕ್ಷಣದಲ್ಲಿ ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಭೀತಿ ಇದೆ. 

ಇದರಿಂದ ಸರ್ಕಾರ ಯಾವಾಗ ಬೇಕಾದರೂ ಅಸ್ಥಿರಗೊಳ್ಳಬಹುದು ಎಂಬ ಚಿಂತೆ ಕಾಡಿತ್ತು. ಆದರೆ, ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಕೂಲ ಫಲಿತಾಂಶ ಬಂದಿರುವ ಹಿನ್ನೆಲೆಯಲ್ಲಿ ಆ ಪಕ್ಷ ಕಾಂಗ್ರೆಸ್‌ನ ಶಾಸಕರನ್ನು ತನ್ನತ್ತ ಸೆಳೆಯುವ ಪ್ರಯತ್ನಗಳಿಗೆ ತಾತ್ಕಾಲಿಕವಾಗಿಯಾದರೂ ನಿಲ್ಲಿಸಬಹುದು ಎಂಬ ನಿರೀಕ್ಷೆಯಿದೆ.

ಇಷ್ಟಾದರೆ ಸಾಕು, ಕಾಂಗ್ರೆಸ್‌ನೊಳಗಿನ ಅತೃಪ್ತರು ಸರ್ಕಾರದ ಅಸ್ತಿತ್ವದ ಬೆದರಿಕೆಯೊಡ್ಡುವುದನ್ನು ಅನಿವಾರ್ಯವಾಗಿ ನಿಲ್ಲಿಸಬೇಕಾಗುತ್ತದೆ. ಇದಿಷ್ಟೇ ಅಲ್ಲ, ಆಪರೇಷನ್‌ ಕಮಲದ ಭೀತಿಯಿಂದ ಕಾಂಗ್ರೆಸ್‌ ನಾಯಕರು ಬಿಜೆಪಿಯ ಕೆಲ ಶಾಸಕರನ್ನು ಸೆಳೆಯಲು ಯತ್ನಿಸಿದ್ದರು. 

ಈ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯ ಇಂತಹ ಶಾಸಕರು ಕಾಂಗ್ರೆಸ್‌ನತ್ತ ಬರುವ ಒಲವು ತೋರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಇಂತಹ ಪರಿಸ್ಥಿತಿಯಿರುವಾಗ ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡವರನ್ನು ಪಕ್ಷದಿಂದ ಉಚ್ಚಾಟಿಸುವಂತಹ ಗಂಭೀರ ಕ್ರಮ ಕೈಗೊಳ್ಳುವ ಮೂಲಕ ಅತೃಪ್ತರ ಗುಂಪನ್ನು ಸಂಪೂರ್ಣ ತಣ್ಣಗಾಗಿಸಲು ಕಾಂಗ್ರೆಸ್‌ ವರಿಷ್ಠರು ಮುಂದಾಗಬಹುದು ಎಂಬ ಭೀತಿ ಅತೃಪ್ತ ಶಾಸಕರಿಗೆ ಹುಟ್ಟುವ ಸಾಧ್ಯತೆಯಿದೆ.