Asianet Suvarna News Asianet Suvarna News

Karnataka Politics: ಗಂಗಾಕಲ್ಯಾಣದಲ್ಲಿ 431 ಕೋಟಿ ಗೋಲ್ಮಾಲ್‌: ಪ್ರಿಯಾಂಕ್‌ ಖರ್ಗೆ

*  ಸಮಾಜ ಕಲ್ಯಾಣ ಇಲಾಖೆ ನಿಗಮಗಳಲ್ಲಿ ಭಾರಿ ಭ್ರಷ್ಟಾಚಾರ
*  ಅನರ್ಹರಿಗೆ ಗುತ್ತಿಗೆ, ಕೋಟ್ಯಂತರ ರು. ಅವ್ಯವಹಾರ
*  ಇದರಲ್ಲಿ ಯಾರ‍್ಯಾರಿಗೆ ಎಷ್ಟೆಷ್ಟು ಕಿಕ್‌ ಬ್ಯಾಕ್‌ ಹೋಗಿದೆ ಎಂದು ಪ್ರಶ್ನಿಸಿದ ಖರ್ಗೆ
 

431 Crore Golmaal in Ganga Kalyana Project Says Priyank Kharge grg
Author
Bengaluru, First Published May 18, 2022, 11:33 AM IST

ಬೆಂಗಳೂರು(ಮೇ.18):  ಸಮಾಜ ಕಲ್ಯಾಣ ಇಲಾಖೆಯ ನಿಗಮಗಳಲ್ಲಿ ಕೊಳವೆ ಬಾವಿ ಕೊರೆಸುವ 431 ಕೋಟಿ ರು. ವೆಚ್ಚದ ಕಾಮಗಾರಿಯಲ್ಲಿ ಭಾರಿ ಅಕ್ರಮ ನಡೆದಿದೆ. ಅನರ್ಹರಿಗೆ ಗುತ್ತಿಗೆ ಕಾಮಗಾರಿ ನೀಡಲಾಗಿದ್ದು, ಕೋಟ್ಯಂತರ ರು. ಅವ್ಯವಹಾರ ನಡೆಸಲಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆಯ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಯಲು 84 ಸಾವಿರ ರು. ವೆಚ್ಚವಾದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ 1.93 ಲಕ್ಷ ರು. ವೆಚ್ಚವಾಗಿದೆ. ಬಿಜೆಪಿಯ 40 ಪರ್ಸೆಂಟ್‌ ಭ್ರಷ್ಟಾಚಾರವನ್ನು ಮಾನದಂಡವಾಗಿ ನೋಡಿದರೆ 431 ಕೋಟಿ ರು. ಯೋಜನೆಯಲ್ಲಿ 173 ಕೋಟಿ ರು. ಅವ್ಯವಹಾರ ನಡೆದಿದೆ. ಇದರಲ್ಲಿ ಯಾರ‍್ಯಾರಿಗೆ ಎಷ್ಟೆಷ್ಟು ಕಿಕ್‌ ಬ್ಯಾಕ್‌ ಹೋಗಿದೆ ಎಂದು ಪ್ರಶ್ನಿಸಿದರು.

PSI Recruitment Scam: ಕಿಂಗ್‌ಪಿನ್‌ ಸರ್ಕಾರದ ಒಳಗೂ ಇರಬಹುದು: ಪ್ರಿಯಾಂಕ್‌ ಖರ್ಗೆ

ಗಂಗಾ ಕಲ್ಯಾಣ ಯೋಜನೆಯಲ್ಲಿ 14,577 ಕೊಳವೆ ಬಾವಿ ಕೊರೆಯುವ 431 ಕೋಟಿ ರು. ಮೊತ್ತದ ಯೋಜನೆ ಇದಾಗಿದೆ. ರಾಮನಗರದ ಪ್ಯಾಕೇಜ್‌ 5ರ ಯೋಜನೆಗೆ ಶಕ್ತಿ ಬೋರ್‌ವೆಲ್‌ನವರು ನಿಗದಿಯಷ್ಟು ಕೊಳವೆ ಬಾವಿ ಕೊರೆದಿಲ್ಲ, ಮೊತ್ತವೂ ಸರಿ ಹೊಂದುವುದಿಲ್ಲ ಎಂದು ಮೊದಲ ಬಾರಿ ತಿರಸ್ಕರಿಸಲಾಗಿತ್ತು. ತಿಂಗಳ ನಂತರ ಎರಡನೇ ಬಾರಿ ಅರ್ಜಿ ಹಾಕಿದಾಗ ಅರ್ಹತೆ ಪಡೆದಿದ್ದಾರೆ. ಕೇವಲ ಒಂದೇ ತಿಂಗಳಲ್ಲಿ ಹೇಗೆ ಅರ್ಹತೆ ಪಡೆದರು ಎಂದು ಅನುಮಾನ ವ್ಯಕ್ತಪಡಿಸಿದರು.

ಇದೇ ರೀತಿ ಲಕ್ಷ್ಮಿ ವೆಂಕಟೇಶ್ವರ ಬೋರ್‌ವೆಲ್‌, ಬಾಲಾಜಿ ಬೋರ್‌ವೆಲ್‌ನವರೂ ಮೊದಲ ಬಾರಿ ತಿರಸ್ಕೃತಗೊಂಡು ಒಂದೇ ತಿಂಗಳಲ್ಲಿ ಮತ್ತೆ ಅರ್ಹತೆ ಪಡೆದಿದ್ದಾರೆ. ಇದೆಲ್ಲಾ ಹೇಗೆ ಸಾಧ್ಯ? ಇದನ್ನು ವಿಧಾನ ಮಂಡಲ ಅಧೀವೇಶನದಲ್ಲಿ ನಾನು ಪ್ರಶ್ನಿಸಿದ್ದಾಗ ಯಾವುದೇ ಅಕ್ರಮ ನಡೆದಿಲ್ಲ ಎಂದು ಸಚಿವರು ಉತ್ತರ ನೀಡಿದ್ದರು. ಆದರೆ ನಂತರ ತನಿಖೆಗೆ ಆದೇಶಿಸಿದ್ದಾರೆ ಎಂದು ಟೀಕಿಸಿದರು.

ವೀರಭದ್ರಪ್ಪ ಬೋರ್‌ವೆಲ್ಸ್‌ನವರಿಗೆ 1136 ಕೊಳವೆ ಬಾವಿ ನೀಡಲಾಗಿದೆ. ಇವರಿಗೆ 13 ಕೋಟಿ ಮೊತ್ತಕ್ಕೆ ಮಾತ್ರ ಸಾಮರ್ಥ್ಯವಿದ್ದು, 47.52 ಕೋಟಿ ರು. ಮೊತ್ತದ ಟೆಂಡರ್‌ ನೀಡಲಾಗಿದೆ. ಬಾಲಾಜಿ ಬೋರ್‌ವೆಲ್‌ 14 ಕೋಟಿ ರು. ಕಾಮಗಾರಿಗೆ ಅರ್ಹತೆ ಹೊಂದಿದ್ದು, 24 ಕೋಟಿ ಮೊತ್ತದ ಕಾಮಗಾರಿ ನೀಡಲಾಗಿದೆ. ಮಾರುತಿ ರಾಕ್‌ ಡ್ರಿಲ್ಲರ್‌ನವರು 21 ಕೋಟಿ ರು. ಕಾಮಗಾರಿಗೆ ಅರ್ಹರಿದ್ದು 55 ಕೋಟಿ ಮೊತ್ತದ ಕಾಮಗಾರಿ ಸಿಕ್ಕಿದೆ. ಟೆಂಡರ್‌ ಪರಿಶೀಲನಾ ಸಮಿತಿ ಕತ್ತೆ ಕಾಯುತ್ತಿತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
 

Follow Us:
Download App:
  • android
  • ios