ಬೆಂಗಳೂರಿನಲ್ಲಿ 6 ಲಕ್ಷ ಮತದಾರರ ಹೆಸರುಗಳು ಡಿಲೀಟ್‌ ಆಗಿದೆ. ಚುನಾವಣಾ ಆಯೋಗ ಎಲ್ಲರಿಗೂ ಮಾಹಿತಿ ನೀಡಿಯೇ ಡಿಲೀಟ್‌ ಮಾಡಿದೆ: ಸತೀಶ್‌ ರೆಡ್ಡಿ 

ಬೆಂಗಳೂರು(ನ.25): ಮತದಾರರ ಗೌಪ್ಯತೆಯನ್ನ ಅಕ್ರಮವಾಗಿ ಕದ್ದಿದೆಯೆಂಬ ಕಾಂಗ್ರೆಸ್‌ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ಎಂ. ಸತೀಶ್‌ ರೆಡ್ಡಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿಯೂ 31 ಸಾವಿರ ಮತದಾರರ ಗುರುತಿನ ಚೀಟಿಯ ನ್ನು ಡಿಲೀಟ್‌ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

ವೋಟರ್‌ ಐಡಿ ಪ್ರಕರಣದ ಬಗ್ಗೆ ಶಾಸಕ ಸತೀಶ್‌ ರೆಡ್ಡಿ ಇಂದು ಶಾಸಕರ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದು ಮಾತನಾಡಿದರು. ಬೆಂಗಳೂರಿನಲ್ಲಿ 6 ಲಕ್ಷ ಮತದಾರರ ಹೆಸರುಗಳು ಡಿಲೀಟ್‌ ಆಗಿದೆ. ಚುನಾವಣಾ ಆಯೋಗ ಎಲ್ಲರಿಗೂ ಮಾಹಿತಿ ನೀಡಿಯೇ ಡಿಲೀಟ್‌ ಮಾಡಿದೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲೂ ಎರಡೆರಡು ಕಡೆ ಹೆಸರಿದ್ದವರ ವೋಟರ್‌ ಐಡಿ ಡಿಲೀಟ್‌ ಆಗಿದೆ. ನಾವು ಯಾವುದೇ ಅಕ್ರಮದಲ್ಲೂ ಭಾಗಿಯಾಗಿಲ್ಲ. 2016ರಲ್ಲಿ ಆಗಿನ ಕಾಂಗ್ರೇಸ್‌ ಸರ್ಕಾರ ಚಿಲುಮೆಗೆ ಅನುಮತಿ ನೀಡಿತ್ತು. ಆದರೆ, ನಮ್ಮ ಸರ್ಕಾರ ಅವರಿಗೆ ಯಾವುದೇ ಅನುಮತಿ ನೀಡಿಲ್ಲ. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಕಾಂಗ್ರೇಸ್‌ ಗಿಮಿಕ್‌ ಮಾಡುತ್ತಿದೆಯೆಂದು ಸತೀಶ್‌ ರೆಡ್ಡಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ನ. 28ರಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತೆ ಪಾದಯಾತ್ರೆ..!

ಇಲ್ಲಸಲ್ಲದ ಆರೋಪ: 

ನನ್ನ ವಿರುದ್ಧ ಸ್ವಯಂ ಘೋಷಿತ ಕಾಂಗ್ರೆಸ್‌ ನಾಯಕಿ ಕವಿತಾರೆಡ್ಡಿಯವರು ಹಲವಾರು ವರ್ಷಗಳಿಂದ ವಿವಿಧ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಅವಮಾನಕ್ಕೆ ಗುರಿಯಾಗಿದ್ದಾರೆ. ಅವರ ವಿರುದ್ದ ಎಫ್‌.ಐ.ಆರ್‌. ಸಹ ದಾಖಲಾಗಿದೆ. ನಿರಾಧಾರ ಆರೋಪದ ಮೇರೆಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಡಿಲೀಟ್‌ ಮಾಡಿರುವ ಬಗ್ಗೆ ಸುಳ್ಳು ಆರೋಪ ಮಾಡಿ ಸಂಬಂಧವಿಲ್ಲದ ಚಿಲುಮೆ ಸಂಸ್ಥೆಗೂ ನನಗೂ ಸಂಬಂಧ ಕಲ್ಪಿಸುವಂತೆ ನನ್ನ ಕಛೇರಿಯ ಭಾವಚಿತ್ರಗಳನ್ನು ಮಾರ್ಫಿಂಗ್‌ ಮಾಡಿ ಜನರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಕವಿತಾರೆಡ್ಡಿ ವಿರುದ್ಧ ಈಗಾಗಲೇ ಪಕ್ಷದ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆಂದರು.