ಪ್ರತಿ ತಿಂಗಳು 200 ಯುನಿಟ್‌ವರೆಗೆ ಉಚಿತ ಗೃಹ ಬಳಕೆ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಹೇಳಿದೆ. ಆದರೆ ಈ ಘೋಷಣೆಯಲ್ಲೇ ಮೋಸ ಇದೆ. ಗೃಹ ಬಳಕೆ ವಿದ್ಯುತ್‌ 60-70 ಯುನಿಟ್‌ಗಿಂತ ಹೆಚ್ಚಾಗಿ ಬಳಕೆಯೇ ಆಗುವುದಿಲ್ಲ.

ಬೆಂಗಳೂರು (ಮಾ.07): ‘ಪ್ರತಿ ತಿಂಗಳು 200 ಯುನಿಟ್‌ವರೆಗೆ ಉಚಿತ ಗೃಹ ಬಳಕೆ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಹೇಳಿದೆ. ಆದರೆ ಈ ಘೋಷಣೆಯಲ್ಲೇ ಮೋಸ ಇದೆ. ಗೃಹ ಬಳಕೆ ವಿದ್ಯುತ್‌ 60-70 ಯುನಿಟ್‌ಗಿಂತ ಹೆಚ್ಚಾಗಿ ಬಳಕೆಯೇ ಆಗುವುದಿಲ್ಲ. ಹೀಗಿದ್ದರೂ 200 ಯುನಿಟ್‌ವರೆಗೆ ಉಚಿತ ಎಂದು ಹೇಳುವುದು ಜನರಿಗೆ ಏಮಾರಿಸಿದಂತೆ ಅಲ್ಲವೇ?’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಬೆಸ್ಕಾಂ ವತಿಯಿಂದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಸ್ಕಾಂ ನಿರ್ಮಿಸಿರುವ 17 ನೂತನ ಕಟ್ಟಡಗಳ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.

ನಾವು ವೈಜ್ಞಾನಿಕವಾಗಿ ಗಮನಿಸಿದರೆ, 200 ಯುನಿಟ್‌ ಉಚಿತ ವಿದ್ಯುತ್‌ ಕೊಡುತ್ತೇವೆ ಎನ್ನುವುದರಲ್ಲೇ ಮೋಸ ಇದೆ. ಈಗಾಗಲೇ ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಗಳಡಿ ಬಡ ಜನರಿಗೆ 40 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಬಡವರ ಗೃಹ ವಿದ್ಯುತ್‌ ಬಳಕೆ 60-70 ಯುನಿಟ್‌ ದಾಟುವುದಿಲ್ಲ. ಹೀಗಿದ್ದರೂ 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತೇವೆ ಎನ್ನುವುದು ಜನರನ್ನು ಏಮಾರಿಸಿದಂತಲ್ಲವೇ? ಇದರಲ್ಲಿ ಏನು ಅರ್ಥವಿದೆ? ಎಂದು ಕಿಡಿಕಾರಿದರು. ರಾಜ್ಯದ ವಿದ್ಯುತ್‌ ಉತ್ಪಾದನೆಯ ಬಗ್ಗೆಯೇ ಗೊತ್ತಿಲ್ಲದೆ ಉಚಿತ ವಿದ್ಯುತ್‌ ಬಗ್ಗೆ ಮಾತನಾಡುತ್ತಿದ್ದಾರೆ. ಇಂಧನ ಕ್ಷೇತ್ರದಲ್ಲಿ ಪವರ್‌ ಪಾಲಿಟಿಕ್ಸ್‌ ಮಾಡಬಾರದು. ಇದು ಜನರಿಗೆ ಮೋಸ ಮಾಡುವ ತಂತ್ರ ಎಂದರು.

ತಪ್ಪು ಮುಚ್ಚಿ ಹಾಕುವುದು ಕಾಂಗ್ರೆಸ್‌ ನೈತಿಕತೆ: ಸಿಎಂ ಬೊಮ್ಮಾ​ಯಿ

ಕೆಪಿಟಿಸಿಎಲ್‌ಗೆ 3000 ಕೋಟಿ: ಕೇಂದ್ರ ಸರ್ಕಾರ ರೈತರ ಸೋಲಾರ್‌ ಪಂಪ್‌ಸೆಟ್‌ಗಳಿಗೆ ಸಹಾಯ ನೀಡುತ್ತಿದೆ. ಸುಗಮ ವಿದ್ಯುತ್‌ ರವಾನೆಗೆ ಈ ವರ್ಷ ಬಜೆಟ್‌ನಲ್ಲಿ 3000 ಕೋಟಿ ರು.ಗಳನ್ನು ಕೆಪಿಟಿಸಿಎಲ್‌ಗೆ ನೀಡುತ್ತಿದ್ದೇವೆ. ಕೆಪಿಟಿಸಿಎಲ್‌ ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಕೇಂದ್ರಗಳ ಮೂಲಕ ಉತ್ತಮ ಕೆಲಸಗಳು ಆಗಲಿ ಎಂದು ಸಲಹೆ ನೀಡಿದರು.

3 ಲಕ್ಷ ಮನೆಗಳಿಗೆ ‘ಬೆಳಕು’- ಸುನಿಲ್‌: ಇಂಧನ ಸಚಿವ ವಿ. ಸುನಿಲ್‌ಕುಮಾರ್‌ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಕೆಲವೇ ತಿಂಗಳಲ್ಲಿ ಎಸ್ಕಾಂಗಳಿಗೆ ಹಣ ಬಿಡುಗಡೆ ಮಾಡಿದರು. 3 ಲಕ್ಷ ಮನೆಗಳಿಗೆ ‘ಬೆಳಕು’ ಯೋಜನೆಯಡಿ ಉಚಿತ ವಿದ್ಯುತ್‌ ಸಂಪರ್ಕ ನೀಡಿದರು. ನಗರಾಭಿವೃದ್ಧಿ ಇಲಾಖೆ ಜತೆ ಚರ್ಚಿಸಿ ಓಸಿ ಕಡ್ಡಾಯ ತೆಗೆದುಹಾಕಿ, 10 ಲಕ್ಷ ಮನೆಗೆ ವಿದ್ಯುತ್‌ ಸಂಪರ್ಕ ಮಾಡಲಾಯಿತು. ಅವರ ಅವಧಿಯಲ್ಲಾದ ಸುಧಾರಣೆಗಳಿಂದಾಗಿ ಮಾರ್ಚ್‌ನಲ್ಲಿ 15,543 ಮೆ.ವ್ಯಾಟ್‌ ವಿದ್ಯುತ್‌ ಬೇಡಿಕೆ ಬಂದರೂ ನೀಗಿಸಿದ್ದೇವೆ. 2 ವರ್ಷ ಗುಣಮಟ್ಟದ ವಿದ್ಯುತ್‌ ನೀಡಿದ್ದೇವೆ ಎಂದು ಹೇಳಿದರು.

ಕೆಲ ಷಡ್ಯಂತ್ರ​ಗಳು ಬಿಎ​ಸ್‌ವೈ ಹಿಂದೆ​ಳೆಯೋ ಕೆಲಸ ಮಾಡಿವೆ: ಸಿಎಂ ಬೊಮ್ಮಾಯಿ

ಉಚಿತ ವಿದ್ಯುತ್‌ ಘೋಷಣೆ ಖಾಸಗೀಕರಣ ಹುನ್ನಾರ: ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಘೋಷಣೆ ಬಗ್ಗೆ ಮಾತನಾಡಿದ ಇಂಧನ ಸಚಿವ ವಿ. ಸುನಿಲ್‌ಕುಮಾರ್‌, ‘ಕೆಲವರು ಉಚಿತ ವಿದ್ಯುತ್‌ ಕೊಡುವ ಮೂಲಕ ಎಸ್ಕಾಂಗಳನ್ನು ದಿವಾಳಿ ಮಾಡಿ ಖಾಸಗೀಕರಣದ ಹುನ್ನಾರ ಮಾಡುತ್ತಿದ್ದಾರೆ. ಉಚಿತ ವಿದ್ಯುತ್‌ ಕೊಡುವ ಸುಳ್ಳಿನ ಮೂಲಕ ಖಾಸಗೀಕರಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ನಾವು ಭಾಗ್ಯಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ನೀಡುತ್ತಿದ್ದೇವೆ. ಅದನ್ನು ಇನ್ನಷ್ಟುಅಗತ್ಯವಿರುವವರಿಗೆ ವಿಸ್ತರಿಸುತ್ತೇವೆ. ಮುಂದಿನ ದಿನಗಳಲ್ಲಿ ನಾವು ಇನ್ನಷ್ಟುಸಿಹಿ ಸುದ್ದಿ ಕೊಡುತ್ತೇವೆ ಎಂದು ಭರವಸೆ ನೀಡುತ್ತೇವೆ’ ಎಂದು ಹೇಳಿದರು.