ಜೈಪುರ, (ಡಿ.11): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದ ಭಾರತೀಯ ಬುಡಕಟ್ಟು ಪಕ್ಷ(ಬಿಟಿಪಿ)ದ ಇಬ್ಬರು ಶಾಸಕರು ಬೆಂಬಲ ವಾಪಸ್ ಪಡೆದಿದ್ದಾರೆ.

ಇತ್ತೀಚೆಗಷ್ಟೇ ನಡೆದ ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದ ಬೆನ್ನಲ್ಲೇ ರಾಜಸ್ಥಾನ್ ರಾಜಕೀಯದಲ್ಲಿ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ. ಪಂಚಾಯತ್ ಚುನಾವಣೆಯಲ್ಲಿ ತಮ್ಮನ್ನು ಕಾಂಗ್ರೆಸ್ ಬೆಂಬಲಿಸಿಲ್ಲ ಎಂದು ಬಿಟಿಪಿಯ ಇಬ್ಬರು ಶಾಸಕರು ಆರೋಪಿಸಿದ್ದಾರೆ.

ವಿಶ್ವಾಸಮತ ಗೆದ್ದ ಗೆಹ್ಲೋಟ್‌: 6 ತಿಂಗಳು ಸರ್ಕಾರ ಸೇಫ್‌!

ಗುರುವಾರ 20 ಜಿಲ್ಲಾ ಪರಿಷತ್ ಮತ್ತು 221 ಗ್ರಾಮ ಪಂಚಾಯ್ತಿಯ ಪ್ರಮುಖ್ ಮತ್ತು ಪ್ರಧಾನ್ ಹುದ್ದೆಗಾಗಿ ಚುನಾವಣೆ ನಡೆದಿತ್ತು. ಇದರಲ್ಲಿ 12 ಬಿಜೆಪಿ, 5 ಕಾಂಗ್ರೆಸ್ ಮತ್ತು 3 ಪಕ್ಷೇತರ ಅಭ್ಯರ್ಥಿಗಳು 20 ಜಿಲ್ಲಾ ಪರಿಷತ್ ನ ಪ್ರಮುಖ್ ಹುದ್ದೆಗೆ ಆಯ್ಕೆಯಾಗಿದ್ದರು.

ರಾಜಸ್ಥಾನ್ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬಂಡಾಯ ಸಾರಿ, ರಾಜಕೀಯ ಬಿಕ್ಕಟ್ಟು ಉದ್ಭವಿಸಿದ್ದ ಸಂದರ್ಭದಲ್ಲಿ ಈ ಇಬ್ಬರು ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು.

ಪೈಲಟ್ ಹಾಗೂ ಬೆಂಬಲಿಗರು ಬಂಡಾಯ ಎದ್ದ ಪರಿಣಾಮ ರಾಜಸ್ಥಾನದಲ್ಲಿ ತಿಂಗಳು ಕಾಲ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ನಂತರ ನಡೆದ ಬಹುಮತ ಸಾಬೀತು ಸಂದರ್ಭದಲ್ಲಿ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಧ್ವನಿ ಮತದ ಮೂಲಕ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿತ್ತು. ಆದ್ರೆ, ಇದೀಗ ಬಿಟಿಪಿ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. 

200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 105, ಬಿಜೆಪಿ 77, ಆರ್ ಎಲ್ ಪಿ 03, ಬಿಟಿಪಿ 02, ಪಕ್ಷೇತರ 01 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.