ಕಾಂಗ್ರೆಸ್ ಗೆ ಕೈ ಕೊಡ್ತಾರ 11 ಶಾಸಕರು ..? ಇಬ್ಬರು ಬಿಜೆಪಿ ತೆಕ್ಕೆಗೆ
ಕರ್ನಾಟಕ ರಾಜಕೀಯ ವಿಪ್ಲವ ಮಹತ್ವದ ತಿರುವು ಪಡೆದಿದೆ. ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಆಯೋಜಿಸಿದ್ದ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಅತೃಪ್ತ ಶಾಸಕರು ಗೈರು ಹಾಜರಾದರು. ಅಷ್ಟೇ ಅಲ್ಲ, ಸಭೆಗೆ ಹಾಜರಾದ ಅತೃಪ್ತರ ಪೈಕಿ ಐವರು ಮತ್ತೆ ಬಿಜೆಪಿಯ ತೆಕ್ಕೆಗೆ ಹಾರುವ ಭೀತಿ ತೀವ್ರವಾಗಿ ಕಾಡಿದೆ.
ಬೆಂಗಳೂರು : ದಿನೇ ದಿನೇ ರೋಚಕವಾಗುತ್ತಿರುವ ಕರ್ನಾಟಕ ರಾಜಕೀಯ ವಿಪ್ಲವ ಶುಕ್ರವಾರ ಮಹತ್ವದ ತಿರುವು ಪಡೆದಿದ್ದು, ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ರೆಸಾರ್ಟ್ ರಾಜಕಾರಣಕ್ಕೆ ಶರಣಾಗಿದೆ. ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಆಯೋಜಿಸಿದ್ದ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಅತೃಪ್ತ ಶಾಸಕರು ಗೈರು ಹಾಜರಾದರು. ಅಷ್ಟೇ ಅಲ್ಲ, ಸಭೆಗೆ ಹಾಜರಾದ ಅತೃಪ್ತರ ಪೈಕಿ ಐವರು ಮತ್ತೆ ಬಿಜೆಪಿಯ ತೆಕ್ಕೆಗೆ ಹಾರುವ ಭೀತಿ ತೀವ್ರವಾಗಿ ಕಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಈ ರೆಸಾರ್ಟ್ ವಾಸ್ತವ್ಯಕ್ಕೆ ಮುಂದಾಗಿದ್ದಾರೆ.
ತನ್ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಪರೇಷನ್ ಕಮಲ ಪ್ರಹಸನಕ್ಕೆ ಇತಿಶ್ರೀ ಹಾಡುತ್ತದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿಹೋಗಿದೆ. ಅಷ್ಟೇ ಅಲ್ಲ, ಆಪರೇಷನ್ ಕಮಲ ಕಮರಿದೆ ಎಂಬುದು ಸಂಪೂರ್ಣ ಸತ್ಯವಲ್ಲ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯತಂತ್ರ ಇನ್ನು ಗುಪ್ತಗಾಮಿನಿಯಾಗಿದೆ ಎಂಬ ಭಾವವನ್ನು ಸಾರ್ವತ್ರಿಕವಾಗಿ ಬಿತ್ತಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಆಯೋಜನೆಯಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆ ಶಾಸಕರ ಆಗಮನದ ವಿಳಂಬದಿಂದಾಗಿ ಸಂಜೆ ಐದಕ್ಕೆ ಆರಂಭವಾಯಿತು. ಈ ಸಭೆಯಲ್ಲಿ ಪಕ್ಷದ 80 ಶಾಸಕರ ಪೈಕಿ 76 ಮಂದಿ ಪಾಲ್ಗೊಂಡರು. ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದರೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಳ್ಳುವ ಸ್ಪಷ್ಟಎಚ್ಚರಿಕೆಯನ್ನು ನೀಡಲಾಗಿದ್ದರೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಚಿಂಚೋಳಿ ಶಾಸಕ ಉಮೇಶ್ ಜಾಧವ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರು ಗೈರು ಹಾಜರಾದರು.
ಈ ಪೈಕಿ ಉಮೇಶ್ ಜಾಧವ್ ಅವರು ಅನಾರೋಗ್ಯದ ಕಾರಣ ತಾವು ಸಭೆಗೆ ಹಾಜರಾಗುವುದಿಲ್ಲ ಎಂದು ಫ್ಯಾಕ್ಸ್ ಸಂದೇಶವನ್ನು ಕಾಂಗ್ರೆಸ್ ನಾಯಕರಿಗೆ ರವಾನಿಸಿದ್ದರೆ, ಬಿ. ನಾಗೇಂದ್ರ ಅವರು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ದೂರವಾಣಿ ಕರೆ ಮಾಡಿ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾವು ವ್ಯಸ್ತರಾಗಿದ್ದು, ಸಭೆಗೆ ಹಾಜರಾಗುವುದಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ, ಉಳಿದ ಇಬ್ಬರು ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರು ತಮ್ಮ ಗೈರು ಹಾಜರಾತಿ ಬಗ್ಗೆ ನಾಯಕರಿಗೆ ಯಾವುದೇ ಮಾಹಿತಿಯನ್ನು ನೀಡದೇ ಸ್ಪಷ್ಟವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕತ್ವವು ತನ್ನ ಎಲ್ಲಾ ಶಾಸಕರನ್ನು ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್ಗೆ ಸ್ಥಳಾಂತರಿಸಲು ತೀರ್ಮಾನಿಸಿದ್ದು, ಶಾಸಕಾಂಗ ಪಕ್ಷದ ಸಭೆಯಿಂದ ನೇರವಾಗಿ ಶಾಸಕರನ್ನು ರೆಸಾರ್ಟ್ ಸಾಗಿಸಲು ಮುಂದಾಗಿಯಿತು. ಇದಕ್ಕೆ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದ ಅತೃಪ್ತರ ಪೈಕಿ ವಿಜಯನಗರ ಶಾಸಕ ಆನಂದ್ ಸಿಂಗ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮತ್ತು ಕಂಪ್ಲಿ ಜೆ.ಎನ್. ಗಣೇಶ್ ಸೇರಿದಂತೆ ಕೆಲವರು ಸಭೆಯ ನಂತರ ಮತ್ತೆ ಬಿಜೆಪಿಯ ತೆಕ್ಕೆಗೆ ಹಿಂತಿರುಗುತ್ತಾರೆ ಹಾಗೂ ಕೆಲವೇ ದಿನಗಳಲ್ಲಿ ರಾಜೀನಾಮೆ ಪ್ರಹಸನ ಮತ್ತೆ ಆರಂಭವಾಗುತ್ತದೆ ಎಂಬ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡಿದ್ದು ಕಾರಣ ಎನ್ನಲಾಗುತ್ತಿದೆ.
ಗೈರು ಹಾಜರಾದವರಿಗೆ ನೋಟಿಸ್:
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, ಸಭೆಗೆ ಗೈರು ಹಾಜರಾದವರ ಪೈಕಿ ಉಮೇಶ್ ಜಾಧವ್ ಅವರು ಅನಾರೋಗ್ಯದ ಕಾರಣ ಸಭೆಗೆ ಹಾಜರಾಗುವುದಿಲ್ಲ ಎಂದು ಪತ್ರ ಬರೆದಿದ್ದಾರೆ. ಮತ್ತೊಬ್ಬ ಶಾಸಕ ಬಿ. ನಾಗೇಂದ್ರ ಅವರು ರಾಜ್ಯ ಉಸ್ತುವಾರಿ ವೇಣುಗೋಪಾಲ್ಗೆ ಕರೆ ಮಾಡಿ ನ್ಯಾಯಾಲಯದ ಸಬೂಬು ನೀಡಿ ಗೈರು ಹಾಜರಾಗಿದ್ದಾರೆ. ಉಳಿದ ಇಬ್ಬರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರು ಯಾವುದೇ ಕಾರಣ ನೀಡಿಲ್ಲ. ಹೀಗಾಗಿ ಈ ಇಬ್ಬರಿಗೆ ಸಭೆಗೆ ಏಕೆ ಹಾಜರಾಗಿಲ್ಲ ಎಂದು ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದರು.
ಅಲ್ಲದೆ, ಸಬೂಬು ನೀಡಿ ಗೈರು ಹಾಜರಾದ ನಾಗೇಂದ್ರ ಹಾಗೂ ಉಮೇಶ್ ಜಾಧವ್ ಅವರು ನೀಡಿರುವ ಕಾರಣಗಳು ವಾಸ್ತವವೇ ಎಂಬುದನ್ನು ಪರಿಶೀಲಿಸಲಾಗುವುದು. ಒಂದು ವೇಳೆ ಅವರು ನೀಡಿದ ಕಾರಣಗಳು ಸರಿಯಲ್ಲ ಎಂದು ಕಂಡು ಬಂದರೆ ಅವರಿಗೂ ನೋಟಿಸ್ ನೀಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಬಿಜೆಪಿಯು ಸತತವಾಗಿ ಕಾಂಗ್ರೆಸ್ ಶಾಸಕರಿಗೆ ಹಣ, ಮಂತ್ರಿಗಿರಿ ಹಾಗೂ ಭವಿಷ್ಯದಲ್ಲಿ ಚುನಾವಣೆಯಲ್ಲಿ ಗೆಲ್ಲಲು ನೆರವು ನೀಡುವುದಾಗಿ ಆಮಿಷ ನೀಡಿ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದೆ. ಹೀಗಾಗಿ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ಬಿಡದಿ ಬಳಿ ಈಗಲ್‌ಟನ್ ರೆಸಾರ್ಟ್ಗೆ ಸ್ಥಳಾಂತರ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಬಿಲದಿಂದ ಬಿಜೆಪಿ ಶಾಸಕರನ್ನು ಹೊರಗೆಳೆವ ತಂತ್ರ?
ಇಷ್ಟಕ್ಕೂ ಕಾಂಗ್ರೆಸ್ ತರಾತುರಿಯಲ್ಲಿ ತನ್ನ ಶಾಸಕರನ್ನು ರೆಸಾರ್ಟ್ಗೆ ಸಾಗಿಸುವ ಕಾರ್ಯತಂತ್ರದ ಹಿಂದೆ ಬಿಜೆಪಿಯ ಆಪರೇಷನ್ ಕಮಲ ತಂತ್ರಗಾರಿಕೆಗೆ ಸಡ್ಡು ಹೊಡೆಯುವ ಚಿಂತನೆಯೂ ಇದೆ ಎನ್ನಲಾಗುತ್ತಿದೆ. ಬಿಜೆಪಿ ನಡೆಸುತ್ತಿರುವ ಆಪರೇಷನ್ಗೆ ಪ್ರತಿಯಾಗಿ ಆ ಪಕ್ಷದ ಕೆಲ ಶಾಸಕರನ್ನು ಸೆಳೆಯಲು ಮೈತ್ರಿಕೂಟ ಸನ್ನದ್ಧವಾಗಿದೆ. ಆದರೆ, ಬಿಜೆಪಿಯು ತನ್ನ ಶಾಸಕರನ್ನು ರೆಸಾರ್ಟ್ನಲ್ಲಿ ಜೋಪಾನ ಮಾಡಿರುವುದು ಈ ಉದ್ದೇಶ ಸಾಧನೆಗೆ ಕಷ್ಟವಾಗುತ್ತಿದೆ.
ಹೀಗಾಗಿ, ಕಾಂಗ್ರೆಸ್ ತಾನು ಕೂಡ ಶಾಸಕರನ್ನು ರೆಸಾರ್ಟ್ಗೆ ಸಾಗಿಸುವ ಮೂಲಕ ತನ್ನ ಶಾಸಕರನ್ನು ಭದ್ರಪಡಿಸಿಕೊಳ್ಳುವುದು ಹಾಗೂ ಬಿಜೆಪಿಯ ಶಾಸಕರು ಹೊರ ಬರುವವರೆಗೂ ಆಪರೇಷನ್ ಕಮಲ ಪ್ರಯತ್ನ ಚಾಲ್ತಿಯಿದೆ ಎಂದು ಬಿಂಬಿಸಿ ಎಲ್ಲಿಯವರೆಗೂ ಬಿಜೆಪಿ ರೆಸಾರ್ಟ್ ರಾಜಕಾರಣ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ತನ್ನ ಶಾಸಕರನ್ನು ರೆಸಾರ್ಟ್ನಲ್ಲಿ ಇರುವಂತೆ ಮಾಡುವುದು. ಬಿಜೆಪಿಯು ತನ್ನ ಶಾಸಕರನ್ನು ರೆಸಾರ್ಟ್ನಿಂದ ‘ಬಿಡುಗಡೆ’ ಮಾಡಿದ ನಂತರ ತಾನೂ ರಿವರ್ಸ್ ಆಪರೇಷನ್ಗೆ ಕೈಹಾಕುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ.
11 ಶಾಸಕರ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಆತಂಕ
2 ಪಕ್ಷೇತರರು ಬಿಜೆಪಿ ತೆಕ್ಕೆಗೆ
ರಾಣೆಬೆನ್ನೂರಿನ ಪಕ್ಷೇತರ ಶಾಸಕ, ಪದಚ್ಯುತ ಸಚಿವ ಆರ್.ಶಂಕರ್, ಮುಳಬಾಗಿಲಿನ ಪಕ್ಷೇತರ ಶಾಸಕ ನಾಗೇಶ್ ಈಗಾಗಲೇ ಬಿಜೆಪಿ ತೆಕ್ಕೆಗೆ
4 ಶಾಸಕರು ಸಭೆಗೆ ಗೈರು
ಶಾಸಕಾಂಗ ಸಭೆಗೆ ಗೈರಾದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಚಿಂಚೋಳಿ ಶಾಸಕ ಉಮೇಶ್ ಜಾಧವ್, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿಯತ್ತ ವಾಲಿದ ಬಗ್ಗೆ ಬಲವಾದ ಶಂಕೆ
5 ಅತೃಪ್ತ ಶಾಸಕರ ಭೀತಿ
ಶಾಸಕಾಂಗ ಸಭೆಗೆ ಹಾಜರಾಗಿದ್ದರೂ ವಿಜಯನಗರ (ಹೊಸಪೇಟೆ) ಶಾಸಕ ಆನಂದ್ ಸಿಂಗ್, ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್, ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಿಜೆಪಿ ತೆಕ್ಕೆಗೆ ಬೀಳುವ ಭೀತಿ
2-3 ಸಚಿವರೂ ಅತ್ತ ಕಡೆ?
ರಾಜೀನಾಮೆ ಪ್ರಹಸನ ಆರಂಭವಾದ ನಂತರ ಇಬ್ಬರು ಅಥವಾ ಮೂವರು ಹಾಲಿ ಸಚಿವರು ಸೇರಿದಂತೆ ‘ಬೇಲಿ ಮೇಲೆ ಕುಳಿತಿರುವ’ ಇನ್ನೂ ಕೆಲವು ಶಾಸಕರು ಪಕ್ಷಾಂತರ ಮಾಡುವ ಭೀತಿ ಕಾಂಗ್ರೆಸ್‌ನಲ್ಲಿದೆ