ಬರಪೀಡಿತ ಜಿಲ್ಲೆಗಳಿಗೆ ಹಣದ ಬದಲು 10 ಕೆ.ಜಿ.ಅಕ್ಕಿ: ಸಚಿವ ಮುನಿಯಪ್ಪ
ಅಕ್ಟೋಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಬರಪೀಡಿತ ತಾಲೂಕುಗಳಲ್ಲಿ ಹಣದ ಬದಲು 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಪುನರುಚ್ಛಾರ ಮಾಡಿದ್ದಾರೆ.

ಬೆಂಗಳೂರು (ಅ.02): ಅಕ್ಟೋಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಬರಪೀಡಿತ ತಾಲೂಕುಗಳಲ್ಲಿ ಹಣದ ಬದಲು 10 ಕೆ.ಜಿ ಅಕ್ಕಿ ನೀಡಲಾಗುವುದು. ಅಕ್ಕಿ ಖರೀದಿ ಟೆಂಡರ್ ಪ್ರಕ್ರಿಯೆ ಸಂಬಂಧಿಸಿದ ಮಾತುಕತೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ 10 ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ಪುನರುಚ್ಛಾರ ಮಾಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಮಂಗಳವಾರವೂ ಸಚಿವರು ಹೇಳಿದ್ದರು.
ಆದರೆ, ಆಹಾರ ಮತ್ತು ನಾಗರಿಕ ಸರಬಾಜು ಇಲಾಖೆ ಅಧಿಕಾರಿಗಳು ಅಕ್ಕಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೀಗಾಗಿ ಮುಂದಿನ ತಿಂಗಳೂ ಹೆಚ್ಚುವರಿ ಅಕ್ಕಿ ಬದಲು ಹಣವನ್ನೇ ನೀಡುವುದಾಗಿ ಹೇಳಿದ್ದರು. ಇದೀಗ ಮತ್ತೆ ಅಕ್ಟೋಬರ್‌ನಲ್ಲಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ, ಅಕ್ಕಿ ಕೊರತೆ ಎದುರಾದ ಹಿನ್ನೆಲೆ ಐದು ಕೆ.ಜಿ ಅಕ್ಕಿ ಬದಲಾಗಿ ಪ್ರತಿಯೊಬ್ಬರಿಗೆ ಪ್ರತಿ ತಿಂಗಳು 170 ರು. ಹಣ ವಿತರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.
ಬಿಜೆಪಿ-ಜೆಡಿಎಸ್ ಮೈತ್ರಿ: ಅಸಮಾಧಾನ ಹೋಗಲಾಡಿಸಲು ಶಾಸಕರು, ಎಂಎಲ್‌ಸಿಗಳ ಸಭೆ ನಡೆಸಿದ ದೇವೇಗೌಡರು!
ಅದರಂತೆ ಫಲಾನುಭವಿಗಳ ಅಕೌಂಟಿಗೆ 170 ರು. ಹಣವನ್ನು ಸಂದಾಯ ಮಾಡಲಾಗಿತ್ತು. ಆದರೆ, ಮುಂದಿನ ತಿಂಗಳಿನಿಂದ ಹಣದ ಬದಲಾಗಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಹತ್ತು ಕೆ ಜಿ ಅಕ್ಕಿಯನ್ನು ಬರ ಪೀಡಿತ ತಾಲೂಕುಗಳಲ್ಲಿ ವಿತರಿಸಲು ನಿರ್ಧಾರ ಮಾಡಲಾಗಿದೆ ಎಂದರು. ಆಹಾರ ಧಾನ್ಯ ಕೊರತೆ ಉಂಟಾಗಲ್ಲವೇ ಎಂಬ ಪ್ರಶ್ನೆಗೆ, ಬರ ಸನ್ನಿವೇಶ ಇದ್ದರೂ ಮುಂದೆ ಮಳೆಯಾಗುವ ಸಾಧ್ಯತೆ ಇದೆ. ಕೃಷಿ ಸುಧಾರಿಸುವ ನಿರೀಕ್ಷೆ ಇದೆ. ರಾಜ್ಯದ ಜನರು ಆತಂಕ ಪಡಬೇಕಿಲ್ಲ ಸರ್ಕಾರ ನಿಮ್ಮ ಜತೆಗೆ ಇದೆ ಎಂದು ಭರವಸೆ ನೀಡಿದರು.