ಹಿಂದಿನ ‘ಅದಕ್ಷ ಸಚಿವ’ರಿಗೆ ಸ್ಥಾನವಿಲ್ಲ, ಯುವ ಶಾಸಕರಿಗೆ ಹೆಚ್ಚಿನ ಅವಕಾಶ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಂಪುಟ ರಚನೆ, ಪ್ರಣಾಳಿಕೆ ಸಮರ್ಥವಾಗಿ ಜಾರಿ ಮಾಡುವವರಿಗೆ ಆದ್ಯತೆ, ಮಹಿಳಾ ಶಾಸಕರಿಗೆ ಉತ್ತಮ ಖಾತೆ.
ಬೆಂಗಳೂರು(ಮೇ.16): ನೂತನ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ದಶ ಸೂತ್ರಗಳನ್ನು ಸಿದ್ಧಪಡಿಸಲಾಗಿದ್ದು, 2013ರ ಸಂಪುಟದಲ್ಲಿ ದಕ್ಷತೆಯಿಂದ ಕೆಲಸ ಮಾಡದವರಿಗೆ ಈ ಬಾರಿ ಅವಕಾಶ ನೀಡದಿರುವುದು ಸೇರಿ ಪಕ್ಷಕ್ಕೆ ಅನುಕೂಲವಾಗುವಂತಹ ಅಂಶಗಳು ಅದರಲ್ಲಿವೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್ ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್ ಕನುಗೋಲು ಅವರು ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ 10 ಅಂಶಗಳ ಸೂತ್ರವನ್ನು ಸಿದ್ಧಪಡಿಸಿದ್ದಾರೆ. ಈ ಪೈಕಿ, ಈ ಹಿಂದಿನ ಅವಧಿಯಲ್ಲಿ ಸಚಿವರಾಗಿದ್ದು ಸಮರ್ಪಕವಾಗಿ ಕೆಲಸ ಮಾಡದವರಿಗೆ ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಲಾಗಿದೆ. ಯುವ ಶಾಸಕರಿಗೆ ಹೆಚ್ಚಿನ ಅವಕಾಶ ನೀಡುವುದು, ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ರಚನೆ, ಪಕ್ಷದ ಪ್ರಣಾಳಿಕೆಯನ್ನು ಸಮರ್ಥವಾಗಿ ಜಾರಿಗೊಳಿಸಿ ಜನರಿಗೆ ಮುಟ್ಟಿಸುವ ಶಾಸಕರಿಗೆ ಅವಕಾಶ ನೀಡುವುದು, ಮಹಿಳಾ ಶಾಸಕರಿಗೆ ಉತ್ತಮ ಖಾತೆ ನೀಡಲು ನಿರ್ಧರಿಸಲಾಗಿದೆ.
Karnataka Election Result 2023: ಸೋತರೂ ಜಗದೀಶ್ ಶೆಟ್ಟರ್‌ಗೆ ಸಚಿವಗಿರಿ?
ಪ್ರದೇಶವಾರು, ಜಾತಿವಾರು, ಯುವಕರು, ಪಕ್ಷನಿಷ್ಠೆ, ಕಾರ್ಯದಕ್ಷತೆ, ವಯೋಮಾನವನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಸಚಿವರಾಗಿ ನೇಮಕವಾಗುವವರು ಈ ಹಿಂದೆ ಬಿಜೆಪಿ ಸರ್ಕಾರದ ಸಚಿವರ ಬಳಿ ಕೆಲಸ ಮಾಡಿದ ಸಿಬ್ಬಂದಿ, ಆಪ್ತ ಕಾರ್ಯದರ್ಶಿಗಳನ್ನು ತಮ್ಮ ಕಚೇರಿಗೆ ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೆಂಬಲಿಗ ಶಾಸಕರು ಎನ್ನುವುದನ್ನು ಬಿಟ್ಟು ಪಕ್ಷಕ್ಕೆ ಅನುಕೂಲವಾಗುವ, ಪಕ್ಷ ಸಂಘಟನೆಗೆ ಒತ್ತು ನೀಡುವವರಿಗೆ ಆದ್ಯತೆ ನೀಡಲಾಗುವುದು ಮತ್ತು ಹಿಂಬಾಲಕರಿಗೆ ಮಣೆ ಹಾಕುವುದು ಬೇಡ ಎಂದು ಹೈಕಮಾಂಡ್ ತೀರ್ಮಾನಿಸಿದೆ. ವಿಧಾನಪರಿಷತ್ ಸದಸ್ಯರಿಗೆ ಸಂಪುಟದಲ್ಲಿ ಹೆಚ್ಚಿನ ಅವಕಾಶ ನೀಡುವುದು ಹಾಗೂ ಜನರಿಗೆ ಸ್ಪರ್ಧಿಸುವ ಐಎಎಸ್/ಐಪಿಎಸ್ ಅಧಿಕಾರಿಗಳನ್ನು ಪ್ರಮುಖ ಇಲಾಖೆಗೆ ನೇಮಕ ಮಾಡುವ ತೀರ್ಮಾನ ಕೈಗೊಳ್ಳುವವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.
