ಇಲ್ಲಿನ ರೆಸ್ಟೋರೆಂಟ್‌ ಮತ್ತು ಪಬ್‌ ಒಂದರಲ್ಲಿ ನಿಗೂಢ ವಿಷಕಾರಿ ಅಂಶವೊಂದು ಹರಡಲ್ಪಟ್ಟಹಿನ್ನೆಲೆಯಲ್ಲಿ, ಅಲ್ಲಿದ್ದ ಸುಮಾರು 500ಕ್ಕೂ ಅಧಿಕ ಮಂದಿಯ ಬಟ್ಟೆಗಳನ್ನು ಒಗೆದು ಸ್ವಚ್ಛಗೊಳಿಸುವಂತೆ ನಿರ್ದೇಶಿಸಿದ ಅಸಹಜ ಘಟನೆ ನಡೆದಿದೆ.

ಲಂಡನ್‌: ಇಲ್ಲಿನ ರೆಸ್ಟೋರೆಂಟ್‌ ಮತ್ತು ಪಬ್‌ ಒಂದರಲ್ಲಿ ನಿಗೂಢ ವಿಷಕಾರಿ ಅಂಶವೊಂದು ಹರಡಲ್ಪಟ್ಟಹಿನ್ನೆಲೆಯಲ್ಲಿ, ಅಲ್ಲಿದ್ದ ಸುಮಾರು 500ಕ್ಕೂ ಅಧಿಕ ಮಂದಿಯ ಬಟ್ಟೆಗಳನ್ನು ಒಗೆದು ಸ್ವಚ್ಛಗೊಳಿಸುವಂತೆ ನಿರ್ದೇಶಿಸಿದ ಅಸಹಜ ಘಟನೆ ನಡೆದಿದೆ.

ಸಾಲಿಸ್‌ಬರಿಯ ಮಿಲ್‌ ಪಬ್‌ ಮತ್ತು ಜಿಜ್ಜಿ ಇಟಾಲಿಯನ್‌ ರೆಸ್ಟೋರೆಂಟ್‌ನಲ್ಲಿ ರಷ್ಯಾದ ಮಾಜಿ ಗೂಢಚಾರ ಸೆರ್ಗೈ ಸ್ಕಿ್ರಪಾಲ್‌ ಮತ್ತು ಅವರ ಮಗಳು ಯುಲಿಯಾಗೆ ವಿಷವುಣಿಸಲು, ದುಷ್ಕರ್ಮಿಗಳು ರಾಸಾಯನಿಕವೊಂದನ್ನು ಬಳಸಿದ್ದಾರೆ ಎನ್ನಲಾಗಿದೆ.

ತಂದೆ ಮತ್ತು ಮಗಳಿಬ್ಬರೂ, ನಗರದ ಮಾಲ್ಟಿಂಗ್ಸ್‌ ಶಾಪಿಂಗ್‌ ಸೆಂಟರ್‌ನಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಧಾವಿಸಿ ಕ್ರಮ ಕೈಗೊಂಡರು. ತುಂಬಾ ಆತಂಕಕಾರಿ ಅಲ್ಲವಾದರೂ, ದೀರ್ಘಾವಧಿ ಪರಿಣಾಮ ಬೀರುವ ವಿಷಕಾರಿ ಅಂಶ ಬಳಕೆಯಾಗಿರುವ ಸಂದೇಹದಿಂದ ಇಂಗ್ಲೆಂಡ್‌ ಆರೋಗ್ಯ ಇಲಾಖೆ, ಪೊಲೀಸ್‌ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಒಗೆಯಲಾಗದ, ಡ್ರೈವಾಶ್‌ ನೀಡಬೇಕಾದ ಬಟ್ಟೆಗಳನ್ನು ಎರಡೆರಡು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬುವಂತೆ ಸೂಚಿಸಲಾಗಿದೆ. ಮೊಬೈಲ್‌ ಫೋನ್‌, ಎಲೆಕ್ಟ್ರಾನಿಕ್‌ ವಸ್ತುಗಳನ್ನು ಮಕ್ಕಳನ್ನು ಒರೆಸುವ ಬಟ್ಟೆಯಲ್ಲಿ ಒರೆಸುವಂತೆ, ಚಿನ್ನಾಭರಣ, ಗ್ಲಾಸ್‌ಗಳನ್ನು ಬಿಸಿ ನೀರು ಮತ್ತು ಡಿಟೆರ್ಜಂಟ್‌ ಬಳಸಿ ತೊಳೆಯುವಂತೆ ನಿರ್ದೇಶಿಸಲಾಗಿದೆ. ಸ್ಕಿ್ರಪಾಲ್‌ ಮತ್ತು ಯೂಲಿಯಾ ಆಸ್ಪತ್ರೆಯಲ್ಲಿ ಗಂಭೀರವಾಗಿದ್ದಾರೆ ಮತ್ತು ಇನ್ನೋರ್ವ ಪೊಲೀಸ್‌ ಅಧಿಕಾರಿಯೂ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಂಡಿದ್ದಾರೆ.