ವಿಜಯವಾಡ[ಜೂ.13]: ಲೋಕಸಭೆಯಲ್ಲಿ 4ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆಯ ಉಪಸ್ಪೀಕರ್‌ ಹುದ್ದೆಯ ಆಫರ್‌ ಅನ್ನು ಬಿಜೆಪಿ ನೀಡಿದೆ.

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಎನ್‌ಡಿಎ ಮೈತ್ರಿಕೂಟದ ಭಾಗವಾಗುವಂತೆ ಆಫರ್‌ ನೀಡಲಾಗಿದ್ದು, ಅದಕ್ಕೆ ಜಗನ್‌ ಒಪ್ಪಿದರೆ, ಲೋಕಸಭೆಯ ಉಪ ಸ್ಪೀಕರ್‌ ಸ್ಥಾನವನ್ನು ವೈಎಸ್‌ಆರ್‌ಸಿಪಿಗೆ ಬಿಟ್ಟುಕೊಡುವುದಾಗಿ ಬಿಜೆಪಿ ಹೇಳಿದೆ. ಆದರೆ, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ತಮಗೆ ಸ್ವಲ್ಪ ಕಾಲಾವಕಾಶ ಬೇಕೆಂದು ಜಗನ್‌ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ವಿಜಯವಾಡದಲ್ಲಿ ಆಂಧ್ರಪ್ರದೇಶ ಸಿಎಂ ಹಾಗೂ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್‌ ಅವರನ್ನು ಭೇಟಿಯಾದ ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಜಿ.ವಿ.ಎಲ್‌ ನರಸಿಂಹ ರಾವ್‌ ಅವರು, ಈ ಆಫರ್‌ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ವೈಎಸ್‌ಆರ್‌ಸಿಪಿ ಇದುವರೆಗೂ ಮೌನ ಮುರಿದಿಲ್ಲ. ಜಗನ್‌ ನೇತೃತ್ವದ ವೈಎಸ್‌ಆರ್‌ಸಿಪಿ 22 ಲೋಕಸಭಾ ಕ್ಷೇತ್ರಗಳನ್ನು ಜಯಿಸಿದೆ.