ನವದೆಹಲಿ(ಜ.27): ಸಾಧು ಸಂತರ ಬೀಡು. ಜಗತ್ತಿಗೆ ವೇದಗಳನ್ನು ಕೊಟ್ಟ ನಾಡು. ಅಧ್ಯಾತ್ಮದ ಶಕ್ತಿಯನ್ನು ಪ್ರಪಂಚಕ್ಕೆ ಮನದಟ್ಟು ಮಾಡಿಕೊಟ್ಟ ಮಹನೀಯರ ನೆಲೆ ಭಾರತ. 

ಆದರೆ ಭವ್ಯ ಭಾರತ, ಸದೃಢ ಭಾರತ, ಧರ್ಮ ಭಾರತವನ್ನು ಕಟ್ಟಿದ ಸಾಧು ಸಂತರನ್ನು ಈ ದೇಶ ಕಡೆಗಣಿಸುತ್ತಿದೆಯೇ?. ಹೌದು ಎನ್ನುತ್ತಾರೆ ಯೋಗಗುರು ಬಾಬಾ ರಾಮ್‌ದೇವ್.

  ಕಳೆದ 70 ವರ್ಷಗಳಿಂದ ಸಂತ ಸಮುದಾಯದ ಒಬ್ಬ ಸನ್ಯಾಸಿಗೂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ಲಭಿಸಿಲ್ಲ ಎಂದು ರಾಮ್‌ದೇವ್ ಖೇದ ವ್ಯಕ್ತಪಡಿಸಿದ್ದಾರೆ.

ಸನ್ಯಾಸಿಗಳಿಗೂ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿರುವ ರಾಮ್‌ದೇವ್, ಕಳೆದ 70 ವರ್ಷಗಳಲ್ಲಿ ಒಬ್ಬ ಸನ್ಯಾಸಿಯನ್ನೂ ಈ ಪುರಸ್ಕರಕ್ಕೆ ಪರಿಗಣಿಸದಿರುವುದು ದುರಂತ ಎಂದು ಕಿಡಿಕಾರಿದ್ದಾರೆ.

ಮುಂದಿನ ವರ್ಷ ಭಾರತ ರತ್ನ ಪುರಸ್ಕಾರ ನೀಡುವಾಗ ಸನ್ಯಾಸಿ ಒಬ್ಬರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿರುವ ರಾಮ್‌ದೇವ್, ಮಹರ್ಷಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.