ಗರ್ಭಪಾತದ ಮೇಲೆ ಕಟ್ಟುನಿಟ್ಟಿನ ನಿಷೇಧ ಹೊಂದಿದ್ದ ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ಅನುಮತಿ ದೊರಕುವ ಐತಿಹಾಸಿಕ ಬದಲಾವಣೆಗೆ ಕಾರಣವಾದ ಬೆಳಗಾವಿ ಮೂಲದ ಸವಿತಾ ಹಾಲಪ್ಪನವರ್‌ ಹೆಸರೀಗ ಆ ದೇಶದಲ್ಲಿ ಚಿರಸ್ಥಾಯಿಯಾಗುವ ಸಾಧ್ಯತೆಯಿದೆ. 

ಲಂಡನ್‌: ಗರ್ಭಪಾತದ ಮೇಲೆ ಕಟ್ಟುನಿಟ್ಟಿನ ನಿಷೇಧ ಹೊಂದಿದ್ದ ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ಅನುಮತಿ ದೊರಕುವ ಐತಿಹಾಸಿಕ ಬದಲಾವಣೆಗೆ ಕಾರಣವಾದ ಬೆಳಗಾವಿ ಮೂಲದ ಸವಿತಾ ಹಾಲಪ್ಪನವರ್‌ ಹೆಸರೀಗ ಆ ದೇಶದಲ್ಲಿ ಚಿರಸ್ಥಾಯಿಯಾಗುವ ಸಾಧ್ಯತೆಯಿದೆ. ಗರ್ಭಪಾತಕ್ಕೆ ಅನುಮತಿ ನೀಡುವ ಹೊಸ ಕಾಯ್ದೆಗೆ ‘ಸವಿತಾಸ್‌ ಲಾ’ (ಸವಿತಾ ಕಾಯ್ದೆ) ಎಂದು ಐರ್ಲೆಂಡ್‌ ಸರ್ಕಾರ ಹೆಸರಿಡುವ ಸಾಧ್ಯತೆಯಿದೆ.

ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ಶುಕ್ರವಾರವಷ್ಟೇ ಜನಮತಗಣನೆ ನಡೆದು, ಗರ್ಭಪಾತದ ಪರ ಶೇ.70 ಮತ ಚಲಾವಣೆಯಾಗಿತ್ತು. ಅದರೊಂದಿಗೆ ಐರ್ಲೆಂಡ್‌ನ ಸಂವಿ ಧಾನದ 8ನೇ ಪರಿಚ್ಛೇಧಕ್ಕೆ ಶೀಘ್ರದಲ್ಲೇ ತಿದ್ದುಪಡಿ ತಂದು, ಗರ್ಭಪಾತಕ್ಕೆ ಅನುಮತಿ ನೀಡುವ ಕಾಯ್ದೆ ರೂಪಿಸಲಾಗುತ್ತದೆ. ಅದಕ್ಕೆ ಸವಿತಾ ಹೆಸರೇ ಇಡಬೇಕೆಂದು ಗರ್ಭಪಾತಕ್ಕೆ ಅನುಮತಿ ದೊರ ಕಿಸಲು ಹೋರಾಡಿದ್ದ ‘ಯಸ್‌’ ಆಂದೋಲನಕಾರರು ಆಗ್ರಹಿಸಿದ್ದಾರೆ. ಸರ್ಕಾರ ಕೂಡ ಇದನ್ನು ತಿರಸ್ಕರಿಸಿಲ್ಲ. ಆದರೆ, ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆಯೂ ದೊರಕಿಲ್ಲ.

ಬೆಳಗಾವಿ ಜಿಲ್ಲೆಯಲ್ಲಿರುವ ಸವಿತಾ ಅವರ ತಂದೆ ಅಂದಾನಪ್ಪ ಯಾಳಗಿ ಕೂಡ ಐರ್ಲೆಂಡ್‌ನ ಗರ್ಭಪಾತ ಕಾಯ್ದೆಗೆ ತಮ್ಮ ಮಗಳ ಹೆಸರನ್ನೇ ಇಡಬೇಕೆಂದು ಆಗ್ರಹಿಸಿದ್ದಾರೆ.

ಪತಿಯೊಂದಿಗೆ ಐರ್ಲೆಂಡ್‌ನಲ್ಲಿ ನೆಲೆಸಿದ್ದ ಬೆಳಗಾವಿ ಮೂಲದ ದಂತವೈದ್ಯೆ ಸವಿತಾ ಹಾಲಪ್ಪನವರ್‌ 2012ರಲ್ಲಿ ಗರ್ಭಾವಸ್ಥೆಗೆ ಸಂಬಂಧಿಸಿದ ಸಮಸ್ಯೆಯಿಂದ ಸಾವನ್ನಪ್ಪಿದ್ದರು. ಅವರಿಗೆ ತುರ್ತಾಗಿ ಗರ್ಭಪಾತದ ಅಗತ್ಯವಿತ್ತು. ಆದರೆ, ಐರ್ಲೆಂಡ್‌ನಲ್ಲಿ ಅದಕ್ಕೆ ಕಾನೂನಿನ ಸಮ್ಮತಿ ಇಲ್ಲದಿದ್ದುದರಿಂದ ಸೂಕ್ತ ಚಿಕಿತ್ಸೆ ದೊರಕದೆ ಅವರು ಮೃತಪಟ್ಟಿದ್ದರು. ಅದು ಜಗತ್ತಿನಾದ್ಯಂತ ದೊಡ್ಡ ಸುದ್ದಿಯಾಗಿ, ಐರ್ಲೆಂಡ್‌ನಲ್ಲಿ ಜನರು ಗರ್ಭಪಾತಕ್ಕೆ ಅನುಮತಿ ನೀಡುವ ಕಾಯ್ದೆ ಬೇಕೆಂದು ಹೋರಾಟ ಆರಂಭಿಸಿದ್ದರು.