ಶಿವಮೊಗ್ಗ :  ರಾಜ್ಯದಲ್ಲಿ ಯಡಿಯೂರಪ್ಪ ನಂ 1 ನಾಲಾಯಕ್ ಮುಖ್ಯಮಂತ್ರಿ ಆಗಿದ್ದವರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ  ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ. 

 ಬಿಎಸ್ ವೈ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಭೇಟಿ ವಿಚಾರವನ್ನೂ ಪ್ರಸ್ತಾಪಿಸಿದ ಅವರು ಬಂಗಾರಪ್ಪನವರು ಶಂಕುಸ್ಥಾಪನೆ ನೆರವೇರಿಸಿದ್ದ ನದಿ ಯೋಜನೆಯನ್ನು ಈಗ ಜಾರಿಗೊಳಿಸಲು ಪತ್ರ ಕೊಟ್ಟಿದ್ದಾರೆ.  ಈ ಸರ್ಕಾರ ಐಸಿಯು ನಲ್ಲಿದೆ, ಟೇಕಾಫ್ ಆಗಿಲ್ಲ, ಸರ್ಕಾರ ಸತ್ತು ಹೋಗಿದೆ ಎಂದು ಹೇಳುವ ಯಡಿಯೂರಪ್ಪ ಡಿಕೆಶಿ ಭೇಟಿ ಮೂಲಕ ರಾಜಕೀಯ ಧೃವೀಕರಣ ಆಗುತ್ತೆ ಅನ್ನುವ ಸ್ಟಂಟ್ ಮಾಡುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. 

ಅಧಿಕಾರದಲ್ಲಿದ್ದಾಗ ಜಿಲ್ಲೆಯ ಯಾವ ನದಿ ಯೋಜನೆಯನ್ನು ಅನುಷ್ಠಾನ ಮಾಡಲಿಲ್ಲ.  ಕಚವಿ ಏತ ನೀರಾವರಿ ಯೋಜನೆ , ತಾಳಗುಂದ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಲು ಸಿಎಂ ಕುಮಾರಸ್ವಾಮಿ ಬದ್ಧರಾಗಿದ್ದಾರೆ. ಈ ಸರ್ಕಾರ ಬೀಳಿಸುವ ಮಾತಾಡುವ ಯಡಿಯೂರಪ್ಪ ಅವರಿಗೆ ಮಾನ ಮಾರ್ಯಾದೆ, ನಾಚಿಕೆ ಇದೆಯಾ ? ಇವರು ಒಂದು ವಿಕೆಟ್ ತೆಗೆದರೆ ಕುಮಾರಸ್ವಾಮಿ, ಡಿಕೆಶಿ ಗೆ 10 ವಿಕೆಟ್ ತೆಗೆಯುವ ತಾಕತ್ತಿದೆ ಎಂದು ಹೇಳಿದ್ದಾರೆ. 

ರಾಮಜಪ :  ಕಸ್ತೂರಿ ರಂಗನ್ ವರದಿ ಜಾರಿಯಾದರೆ 570 ಹಳ್ಳಿಗಳಿಗೆ ತೊಂದರೆ ಆಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿಲ್ಲ. ಬಿಜೆಪಿಯವರದ್ದು ಕಾಮ್ ಕಿ ಬಾತ್ ಮುಗಿದಿದ್ದು,  ಇನ್ನೆನಿದ್ದರೂ ರಾಮ್ ಕಿ ಬಾತ್ ಶುರುವಾಗಿದೆ. ಚುನಾವಣೆ ಬಂದಾಗ ರಾಮಜಪ ಮಾಡುವ ಬುದ್ದಿಯನ್ನು ಬಿಡಬೇಕು ಎಂದು ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆಯೂ ಮಧು ಬಂಗಾರಪ್ಪ ಪ್ರಸ್ತಾಪಿಸಿದ್ದಾರೆ. 
 
ಆಪರೇಷನ್ ಕಮಲ ಪ್ರಸ್ತಾಪ : ಇದೇ ವೇಳೆ ಆಪರೇಷನ್ ಕಮಲ ವಿಚಾರದ ಬಗ್ಗೆಯೂ ಮಾತನಾಡಿದ ಮಧು ಬಂಗಾರಪ್ಪ ನಮ್ಮ ಶಾಸಕರು ಯಾರಿಗೂ ಸೇಲ್ ಆಗುವ ಪ್ರಾಡೆಕ್ಟ್ ಅಲ್ಲ.  ಶಾಸಕರ ಖರೀದಿಸುವ ದುಸ್ಸಾಹಸ ಕೈ ಬಿಡಿ.  ಡಿ ಕೆ ಶಿವಕುಮಾರ್ ಮೇಲೆ ಯಾರು ಕೇಸ್ ಹಾಕಿಸಿದ್ರು ಎಂಬುದು ಗೊತ್ತಿದೆ. ಅದನ್ನು ನಾನು ಬಹಿರಂಗ ಪಡಿಸಿಲ್ಲ ಎಂದಿದ್ದಾರೆ. 

 ಇನ್ನು ರಾಜ್ಯದಲ್ಲಿ ಹಿಂದೆ ಸಿಎಂ ಆಗಿದ್ದಾಗ ಉತ್ತಮ ಆಡಳಿತ ನೀಡದ ಯಡಿಯೂರಪ್ಪ ಇನ್ನೂ ಯಾವತ್ತೂ ರಾಜ್ಯದಲ್ಲಿ ಸಿಎಂ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.