ವಲಯದಲ್ಲಿರುವಂತೆ ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವ ಸಂಭವವಿದೆ ಎಂದು ಆನ್ ಲೈನ್ ಪತ್ರಿಕೆಯೊಂದು ವರದಿ ಮಾಡಿದೆ
ನವದೆಹಲಿ(ಜು.17): ಸರ್ಕಾರಿ ನೌಕರರ ಸಂಬಳ ಹಾಗೂ ಭತ್ಯೆಯನ್ನು ಪರಿಷ್ಕರಿಸಲು ಪ್ರತಿ ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸುವ ಪರಿಪಾಠವನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.
ವೇತನ ಆಯೋಗ ರಚಿಸಿ, ಅದರ ಶಿಫಾರಸಿಗೆ ಕಾದು, ಆ ನಂತರ ಸಂಬಳ ಹೆಚ್ಚಳ ಮಾಡುವ ಬದಲು ಖಾಸಗಿ ವಲಯದಲ್ಲಿರುವಂತೆ ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವ ಸಂಭವವಿದೆ ಎಂದು ಆನ್ ಲೈನ್ ಪತ್ರಿಕೆಯೊಂದು ವರದಿ ಮಾಡಿದೆ. 2014ರಲ್ಲಿ ಅಧಿಕಾರಕ್ಕೇರಿದಾಗಿನಿಂದ ಒಂದಲ್ಲಾ ಒಂದು ಕ್ರಾಂತಿಕಾರಕ ನಿರ್ಧಾರ ತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರ, ವೇತನ ಆಯೋಗ ರಚಿಸುವ ಸಂಪ್ರದಾಯವನ್ನು ಕೊನೆಗಾಣಿಸಿದರೆ ಅದು ಮತ್ತೊಂದು ಕ್ರಾಂತಿಕಾರಕ ನಡೆಯಾಗಲಿದೆ.
ಹಣದುಬ್ಬರ ಹಾಗೂ ಬೆಲೆ ಏರಿಕೆಯನ್ನು ಗಣನೆಗೆ ತೆಗೆದುಕೊಂಡು ವರ್ಷಕ್ಕೊಮ್ಮೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವ ಕುರಿತಂತೆ ಚರ್ಚೆ ನಡೆಯುತ್ತಿದೆ. ಸರ್ಕಾರದ ಈ ನಿರ್ಧಾರ ಜಾರಿಗೆ ಬಂದರೆ 52 ಲಕ್ಷ ಪಿಂಚಣಿದಾರರು ಹಾಗೂ 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ವರ್ಷಕ್ಕೊಮ್ಮೆ ಸಂಬಳ ಏರಿಕೆ ಕಾಣಲಿದ್ದಾರೆ. ಕೇಂದ್ರ ಸರ್ಕಾರದ ವೇತನ ಆಯೋಗದ ವರದಿ ಅನುಷ್ಠಾನ ನೋಡಿ ಮುಂದಿನ ಹೆಜ್ಜೆ ಇಡುತ್ತಿದ್ದ ರಾಜ್ಯ ಸರ್ಕಾರಗಳು ಕೂಡ ಇದೇ ದಾರಿ ಹಿಡಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ.
