ಬೆಂಗಳೂರು [ಜು.29]: ಅತೃಪ್ತರಾಗಿ ಮುಂಬೈ ಗೆ ತೆರಳಿದ್ದ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಅನರ್ಹರಾಗಿದ್ದು ಇದೀಗ ಐವರು ಬೆಂಗಳೂರಿಗೆ ಮರಳಿದ್ದಾರೆ. 

ಬೆಂಗಳೂರಿಗೆ ಮರಳಿ ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಇನ್ನು ಮೂರು ದಿನಗಳಲ್ಲಿ ಸ್ಫೋಟಕ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ. 

ನಮ್ಮ ರಾಜೀನಾಮೆಗೆ ಕಾರಣ ಏನೆಂದು ಶೀಘ್ರ ತಿಳಿಸುತ್ತೇನೆ. ಆದರೆ ಸರ್ಕಾರದ ಮೇಲಿನ ಅಸಮಾಧಾನವೂ ಇದಕ್ಕೆ ಕಾರಣ. ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ನನಗೆ ಹಣದ ಆಸೆ ಇಲ್ಲ. ಭಗವಂತ ನನಗೆ ಸಾಕಷ್ಟು ನೀಡಿದ್ದಾರೆ.  ಯಾವುದೇ ಅಧಿಕಾರದ ಆಸೆಗಾಗಿಯೂ ನಾನು ರಾಜೀನಾಮೆ ನೀಡಿದ್ದಲ್ಲ. ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ತಾವು ಸಿದ್ಧ ಎಂದು ಎಂಟಿಬಿ ಹೇಳಿದರು. 

ನಮ್ಮನ್ನು ಸ್ಪೀಕರ್ ಅನರ್ಹ ಮಾಡುತ್ತಾರೆ ಎಂದು ಮೊದಲೇ ತಿಳಿದಿತ್ತು. ಆದರೆ ಯಾವ ಪಕ್ಷ ಸೇರಬೇಕು ಎನ್ನುವುದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಮತ್ತೊಂದು ಪಕ್ಷ ಸೇರ್ಪಡೆಯಾಗುವ ಬಗ್ಗೆ ಮುನ್ಸೂಚನೆಯನ್ನೂ ನೀಡಿದರು. 

ಈಗಾಗಲೇ ತಮ್ಮನ್ನು ಅನರ್ಹ ಮಾಡಿದ್ದು,  ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ‌ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.