Asianet Suvarna News Asianet Suvarna News

ಕೊಳಕು ಬೀಚ್‌: ಕರ್ನಾಟಕ ನಂ.2! : ಗೋವಾ ಗಲೀಜಿನಲ್ಲಿ ನಂ.1

ಪ್ಲಾಸ್ಟಿಕ್‌ ಅವಶೇಷಗಳು ಅತ್ಯಂತ ಹೆಚ್ಚಿರುವ ದೇಶದ ಬೀಚ್‌ಗಳ ಪೈಕಿ ಕರ್ನಾಟಕದ ಬೀಚ್‌ಗಳು 2ನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಷಯವನ್ನು ವರದಿಯೊಂದು ಹೊರಗೆಡವಿದೆ. ಈ ಪಟ್ಟಿಯಲ್ಲಿ ಪ್ರವಾಸಿಗರ ಸ್ವರ್ಗ ಎನ್ನಿಸಿಕೊಂಡಿರುವ ಗೋವಾ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್‌ ಮೂರನೇ ಸ್ಥಾನದಲ್ಲಿದೆ.

Worst Beach In Karnataka Goa No 1

ಮುಂಬೈ: ಪ್ಲಾಸ್ಟಿಕ್‌ ಅವಶೇಷಗಳು ಅತ್ಯಂತ ಹೆಚ್ಚಿರುವ ದೇಶದ ಬೀಚ್‌ಗಳ ಪೈಕಿ ಕರ್ನಾಟಕದ ಬೀಚ್‌ಗಳು 2ನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಷಯವನ್ನು ವರದಿಯೊಂದು ಹೊರಗೆಡವಿದೆ. ಈ ಪಟ್ಟಿಯಲ್ಲಿ ಪ್ರವಾಸಿಗರ ಸ್ವರ್ಗ ಎನ್ನಿಸಿಕೊಂಡಿರುವ ಗೋವಾ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್‌ ಮೂರನೇ ಸ್ಥಾನದಲ್ಲಿದೆ.

ಕೊಚ್ಚಿಯ ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) 7516 ಕಿ.ಮೀ ಕರಾವಳಿ ತೀರ ಹೊಂದಿರುವ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 254 ಬೀಚ್‌ಗಳನ್ನು ಪರಿಶೀಲಿಸಿ ಸಿದ್ದಪಡಿಸಿರುವ ವರದಿಯಲ್ಲಿ ಈ ಆತಂಕಕಾರಿ ಮಾಹಿತಿ ಇದೆ.

ವರದಿ ಅನ್ವಯ, ಕರ್ನಾಟಕದ 33 ಬೀಚ್‌ಗಳಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್‌ ಅವಶೇಷಗಳಿವೆ. ಅಂದರೆ ಇಲ್ಲಿನ ಪ್ರತಿ ಒಂದು ಮೀಟರ್‌ ಮರಳಿನಲ್ಲಿ 21.91 ಗ್ರಾಂನಷ್ಟುಪ್ಲಾಸ್ಟಿಕ್‌ ಅವಶೇಷಗಳು ಸಿಗುತ್ತವೆ ವರದಿ ಹೇಳಿದೆ. ಇನ್ನು ನಂ.1 ಸ್ಥಾನದಲ್ಲಿರುವ ಗೋವಾ ಬೀಚ್‌ಗಳಲ್ಲಿ ಪ್ರತಿ 1 ಮೀಟರ್‌ ಮರಳಿನಲ್ಲಿ ಸರಾಸರಿ 25.47 ಗ್ರಾಂ ಪ್ಲಾಸ್ಟಿಕ್‌ ಇದೆ. ಮೂರನೇ ಸ್ಥಾನದಲ್ಲಿ ಗುಜರಾತ್‌ನ ಬೀಚ್‌ಗಳಿದ್ದು, ಅಲ್ಲಿ ಪ್ರತಿ ಒಂದು ಮೀಟರ್‌ ಮರಳಿನಲ್ಲಿ 12.62 ಪ್ಲಾಸ್ಟಿಕ್‌ ಇದೆ.

ಇನ್ನು ಕಸದ ಪ್ರಮಾಣ ಕರ್ನಾಟಕದ ಬೀಚ್‌ಗಳಲ್ಲಿ ಹೆಚ್ಚಿದ್ದು, ಅದು ಪ್ರತಿ ಮೀಟರ್‌ಗೆ 178.44 ಗ್ರಾಂನಷ್ಟಿದೆ. ಗುಜರಾತ್‌ನಲ್ಲಿ ಕಸದ ಪ್ರಮಾಣ ಪ್ರತಿ ಮೀಟರ್‌ಗೆ 90.56 ಗ್ರಾಂನಷ್ಟಿದೆ. ಅತಿ ಕಡಿಮೆ ಕಸ ಹೊಂದಿರುವ ಬೀಚ್‌ಗಳಿರುವುದು ಒಡಿಶಾದಲ್ಲಿ. ಅಲ್ಲಿ ಪ್ರತಿ ಮೀಟರ್‌ಗೆ 0.08 ಗ್ರಾಂ ಕಸವಿದೆ. ಪ್ಲಾಸ್ಟಿಕ್‌ ಕೈಚೀಲಗಳು, ಹರಿದ ಮೀನಿನ ಬಲೆ, ಹಾಲಿನ ಪ್ಯಾಕ್‌ಗಳು, ತೈಲ, ಟೂತ್‌ಪೇಸ್ಟ್‌, ಪಿಇಟಿ ಬಾಟಲ್‌ಗಳು ಬೀಚ್‌ಗಳಲ್ಲಿ ಕಂಡು ಬರುವ ಪ್ರಮುಖ ಪ್ಲಾಸ್ಟಿಕ್‌ ವಸ್ತುಗಳು. ಪ್ಲಾಸ್ಟಿಕ್‌ ಅವಶೇಷಗಳು ಸಮುದ್ರ ಜೀವಿಗೂ ಅಪಾಯವಾಗಿವೆ ಎಂದು ಅಧ್ಯಯನ ತಂಡ ತಿಳಿಸಿದೆ.

ವಸ್ತುಗಳನ್ನು ಬಳಸಿದ ಬಳಿಕ ಎಲ್ಲೆಂದರಲ್ಲಿ ಎಸೆಯುವ ಜನರ ಮನೋಸ್ಥಿತಿಯಿಂದಾಗಿ ಎಲ್ಲೆಡೆ ಎಸೆದ ಪ್ಲಾಸ್ಟಿಕ್‌ ವಸ್ತುಗಳು ಅಂತಿಮವಾಗಿ ಸಮುದ್ರ ಸೇರುತ್ತವೆ. ಈ ಮೂಲಕ ಇಡೀ ಪರಿಸರ ಕೊಳಕಾಗುತ್ತಿದೆ ಎಂದು ವರದಿ ಹೇಳಿದೆ.

Follow Us:
Download App:
  • android
  • ios