ಹಾಸನ :  ‘ಖಾಸಗಿ ವಾಹನಗಳಿಗೆ ರಜೆ ಕೊಡೋಣ-ಜೀವಪ್ರಭೇದಗಳನ್ನು ಕಾಪಾಡೋಣ’ ಎಂಬ ಘೋಷಣೆಯೊಂದಿಗೆ ವಿಶ್ವ ಭೂ-ದಿನದ ಅಂಗವಾಗಿ ಹಾಸನದಲ್ಲಿ ಸೋಮವಾರ ಕರೆ ನೀಡಿದ್ದ ಸ್ವಂತ ವಾಹನಗಳ ಬಳಕೆ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

 ಜಿಲ್ಲಾಡಳಿತ, ಜಿಪಂ, ನ್ಯಾಯಾಂಗ ಇಲಾಖೆ ಸೇರಿದಂತೆ ನಾನಾ ಇಲಾಖೆಗಳು, ಹಸಿರು ಭೂಮಿ ಪ್ರತಿಷ್ಠಾನ, ವ್ಯಾಪಾರಸ್ಥರು, ವೈದ್ಯಕೀಯ ಕ್ಷೇತ್ರದವರು ಸೈಕಲ್‌, ಕಾಲ್ನಡಿಗೆ ಹಾಗೂ ಕುದುರೆ ಮೂಲಕ ಜಾಥಾದಲ್ಲಿ ಭಾಗವಹಿಸಿ ವಿಶ್ವ ಭೂ- ದಿನಾಚರಣೆಗೆ ಮೆರುಗು ನೀಡಿದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರು ತಮ್ಮ ನಿವಾಸದಿಂದ ಕಚೇರಿ ವರೆಗೆ ಕಾಲ್ನಡಿಗೆಯಲ್ಲಿ ಬಂದು ಪರಿಸರ ರಕ್ಷಣೆಯ ಸಂದೇಶ ಸಾರಿದರು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ.ಎಸ್‌.ತಿಮ್ಮಣ್ಣಾಚಾರ್‌ ನ್ಯಾಯಾಲಯದಿಂದ ಹೇಮಾವತಿ ಪ್ರತಿಮೆ ವರೆಗೆ ಕಾಲ್ನಡಿಗೆಯಲ್ಲಿ ಬಂದರು. ಜಿಪಂ ಸಿಇಒ ಡಾ.ಕೆ.ಎನ್‌.ವಿಜಯಪ್ರಕಾಶ್‌ ಹಾಗೂ ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಸೈಕಲ್‌ ಸವಾರಿ ಮಾಡುತ್ತಾ ಜಾಥಾದಲ್ಲಿ ಭಾಗವಹಿಸಿದರು.

ಜನಪ್ರಿಯ ಆಸ್ಪತ್ರೆ ಮುಖ್ಯಸ್ಥ ಡಾ.ಅಬ್ದುಲ್‌ ಬಷೀರ್‌ ಹಾಗೂ ಇತರರು ಎತ್ತಿನಗಾಡಿಯಲ್ಲಿ ಸಂಚರಿಸಿ ಜಾಥಾಗೆ ಮೆರಗು ತಂದರು. ಐವತ್ತಕ್ಕೂ ಹೆಚ್ಚು ಕುದುರೆಗಳೂ ಇದ್ದವು. ಹೇಮಾವತಿ ಪ್ರತಿಮೆ ಬಳಿ ಎಲ್ಲರಿಗೂ ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎನ್‌ಆರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಿದರು.