ನವದೆಹಲಿ[ಜು.05]:  ಬದ್ಧ ವೈರಿ ದೇಶಗಳಾಗಿರುವ ಭಾರತ ಹಾಗೂ ಪಾಕಿಸ್ತಾನದ ನಡುವೆ ಕಾನೂನು ಸಮರಕ್ಕೆ ಕಾರಣವಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಪ್ರಕರಣದ ತೀರ್ಪನ್ನು ನೆದರ್ಲೆಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್‌ ಬುಧವಾರ ಪ್ರಕಟಿಸಲಿದೆ. ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಜಾಧವ್‌ ನೇಣು ಕುಣಿಕೆಯಿಂದ ಪಾರಾಗುತ್ತಾರಾ ಎಂಬ ಕುತೂಹಲವಿದೆ.

ತನ್ನ ರಾಷ್ಟ್ರದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಕಾರಣ ಬಲೂಚಿಸ್ತಾನ ಭಾಗದಲ್ಲಿ ಕುಲಭೂಷಣ್‌ ಜಾಧವ್‌ರನ್ನು ಬಂಧಿಸಿದ್ದಾಗಿ ಹೇಳಿದ್ದ ಪಾಕಿಸ್ತಾನ, ಅವರಿಗೆ 2017ರ ಏಪ್ರಿಲ್‌ನಲ್ಲಿ ಗಲ್ಲು ಶಿಕ್ಷೆ ನೀಡಿತ್ತು. ಇದರ ವಿರುದ್ಧ ಭಾರತ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮರಣದಂಡನೆಗೆ ಅಂತಾರಾಷ್ಟ್ರೀಯ ಕೋರ್ಟ್‌ 2017ರ ಮೇನಲ್ಲಿ ತಡೆಯಾಜ್ಞೆ ನೀಡಿತ್ತು. ಇರಾನ್‌ನಲ್ಲಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಜಾಧವ್‌ ಅವರನ್ನು ಅಲ್ಲಿಂದ ಅಪಹರಿಸಿ ಪಾಕಿಸ್ತಾನ ಕತೆ ಕಟ್ಟುತ್ತಿದೆ ಎಂದು ಭಾರತ ವಾದಿಸಿದೆ. ಬಂಧನದ ಬಳಿಕವೂ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಿಲ್ಲ ಎಂದು ಆಪಾದಿಸಿದೆ.

ಈ ಸಂಬಂಧ ಭಾರತ ಹಾಗೂ ಪಾಕಿಸ್ತಾನ ಫೆಬ್ರವರಿಯಲ್ಲಿ ಮಂಡಿಸಿದ್ದ ವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿದ್ದ ಅಂತಾರಾಷ್ಟ್ರೀಯ ಕೋರ್ಟ್‌ ಬುಧವಾರ ತೀರ್ಪು ಹೊರಡಿಸಲಿದೆ.