ತಗಾದೆ ಬಿಡಿ, ಭಾರತದ ಪ್ರಸ್ತಾಪ ಒಪ್ಪಿಕೊಳ್ಳಿ: ಪಾಕ್‌ಗೆ ವಿಶ್ವಬ್ಯಾಂಕ್ ಸೂಚನೆ

World Bank asks Pakistan to stop pursuing water dispute with India at ICA
Highlights

ಕಿಷನ್‌ಗಂಗಾ ಅಣೆಕಟ್ಟು ವಿವಾದ ವಿಚಾರದಲ್ಲಿ ಪಾಕಿಸ್ತಾನವು ಅಂತರಾಷ್ಟ್ರೀಯ ಸಂಧಾನ ನ್ಯಾಯಾಲಯಕ್ಕೆ ಮೊರೆ ಹೋಗಲು ಚಿಂತನೆ ನಡೆಸಿದೆ. ಆದರೆ, ಭಾರತದ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ವಿಶ್ವಬ್ಯಾಂಕ್ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಏನದು ಕಿಷನ್‌ಗಂಗಾ ವಿವಾದ, ಏನದು ಭಾರತದ ಪ್ರಸ್ತಾಪ ನೋಡೋಣ ಈ ಸ್ಟೋರಿಯಲ್ಲಿ..

ಇಸ್ಲಾಮಾಬಾದ್: ಕಿಷನ್‌ಗಂಗಾ ಅಣೆಕಟ್ಟು ವಿವಾದವನ್ನು ಅಂತರಾಷ್ಟ್ರೀಯ ಸಂಧಾನ ನ್ಯಾಯಾಲಯಕ್ಕೆ ಕೊಂಡೊಯ್ಯದಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿರುವ ವಿಶ್ವಬ್ಯಾಂಕ್, ಭಾರತದ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ತಾಕೀತು ಮಾಡಿದೆ.

ಕಿಷನ್‌ಗಂಗಾ ಅಣೆಕಟ್ಟಿನ ವಿಚಾರದಲ್ಲಿ ಅಂತರಾಷ್ಟ್ರೀಯ ಸಂಧಾನ ನ್ಯಾಯಾಲಯಕ್ಕೆ ಮೊರೆಹೋಗದಂತೆ ವಿಶ್ವಬ್ಯಾಂಕಿನ ಅಧ್ಯಕ್ಷ ಜಿಮ್ ಯಾಂಗ್ ಕಿಂಗ್ ಕಳೆದ ವಾರ ಪಾಕಿಸ್ತಾನಕ್ಕೆ ಸೂಚಿಸಿದ್ದಾರೆಂದು ಪಾಕಿಸ್ತಾನಿ ಪತ್ರಿಕೆ ‘ಡಾನ್’ ವರದಿ ಮಾಡಿದೆ. 

ಕಿಷನ್‌ಗಂಗಾ ಅಣೆಕಟ್ಟಿನ ವಿವಾದದ ವಿಚಾರಣೆಗೆ ನ್ಯಾಯಾಧಿಶರನ್ನು ನೇಮಿಸಲು ಖುದ್ದು ವಿಶ್ವಬ್ಯಾಂಕ್ ನವಂಬರ್‌ 2016ರಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಆದರೆ ಇದೀಗ ತನ್ನ ಹಿಂದಿನ ನಿಲುವಿನಿಂದ ವಿಶ್ವಬ್ಯಾಂಕ್ ಹಿಂದೆ ಸರಿದಿರುವುದು ಭಾರತದ ಮಟ್ಟಿಗೆ ಉತ್ತಮ ಬೆಳವಣಿಗೆಯಾಗಿದೆ. 

ಇಂಡಸ್‌ ನದಿಗೆ ಅಡ್ಡಲಾಗಿ ಭಾರತವು ನಿರ್ಮಿಸುತ್ತಿರುವ ಕಿಷನ್‌ಗಂಗಾ ಅಣೆಕಟ್ಟಿನ ಬಗ್ಗೆ ಪಾಕಿಸ್ತಾನವು ಕ್ಯಾತೆಯಿತ್ತಿದೆ. ಅಣೆಕಟ್ಟಿನ ನಿರ್ಮಾಣವು, 1960ರ ಇಂಡಸ್‌ ಮತ್ತು ಅದರ ಉಪನದಿಗಳ ನೀರು ಹಂಚಿಕೆ ಒಪ್ಪಂದದ  ಉಲ್ಲಂಘನೆಯಾಗಿದೆಯೆಂದು ಪಾಕಿಸ್ತಾನವು ವಾದಿಸುತ್ತಿದೆ. ಆದರೆ ಅಣೆಕಟ್ಟು ನಿರ್ಮಾಣದಿಂದ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ ಎಂದು ಭಾರತದ ವಾದವಾಗಿದೆ.

ಭಾರತದ ವಾದವನ್ನು ಒಪ್ಪದ ಪಾಕಿಸ್ತಾನವು ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಲು ಚಿಂತನೆ ನಡೆಸಿದೆ.  ಉಭಯ ರಾಷ್ಟ್ರಗಳಿಗೆ ಅಣಿಕಟ್ಟಿನ ವಿನ್ಯಾಸ ಸಂಬಂಧಪಟ್ಟಿರುವುದರಿಂದ ತಟಸ್ಥ ತಜ್ಞರನ್ನು ನೇಮಿಸಿ ವಿವಾದವನ್ನು ಬಗೆಹರಿಸಿಕೊಳ್ಳಬಹುದೆಂದು ಭಾರತ ಪ್ರಸ್ತಾಪಿಸಿದೆ.

ಭಾರತದ ಪ್ರಸ್ತಾಪವನ್ನು ನಿರಾಕರಿಸಿ ನ್ಯಾಯಾಲಯದ ಮೆಟ್ಟಿಲೇರಿದರೆ, ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಕೋರ್ಟಿನ ಮೊರೆಹೋಗುವ ಸಂಪ್ರದಾಯ ಮುಂದುವರಿಯಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆಯೆಂದು ವರದಿಯು ಹೇಳಿದೆ.

loader