ಬೆಂಗಳೂರು :  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕರ್ನಾಟಕ ಕಾಂಗ್ರೆಸ್‌ ಮಹಿಳಾ ಘಟಕದ ನಿಯೋಗ ನೀಡಿದ್ದ ಮಹಿಳಾ ದೌರ್ಜನ್ಯ ಪ್ರಕರಣದ ದೂರನ್ನು ರಾಜ್ಯ ಮಹಿಳಾ ಆಯೋಗ ರದ್ದುಪಡಿಸಿದೆ. ಈ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ತೇಜಸ್ವಿ ಸೂರ್ಯ ಅವರು ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿತ್ತು. ಅಲ್ಲದೆ ವಿಚಾರಣೆಗೆ ಹಾಜರಾಗದಿದ್ದರಿಂದ ಸಮನ್ಸ್‌ ಸಹ ಜಾರಿಗೊಳಿಸಿತ್ತು. ಈ ಮಧ್ಯೆ ಟ್ವೀಟರ್‌ನಲ್ಲಿ ದೌರ್ಜನ್ಯದ ಆರೋಪ ಮಾಡಿದ್ದರು ಎನ್ನಲಾದ ಯುವತಿ, ತೇಜಸ್ವಿ ಸೂರ್ಯ ಅವರ ಪರವಾಗಿ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಈ ಆರೋಪ ಸತ್ಯಕ್ಕೆ ದೂರವಾಗಿದೆ. ಹಾಗಾಗಿ ಪ್ರಕರಣವನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ. ಹೀಗಾಗಿ ತೇಜಸ್ವಿ ಸೂರ್ಯ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಇರುವುದರಿಂದ ಆಯೋಗ ವಿಚಾರಣೆ ಕೈಬಿಟ್ಟಿದೆ.

ಈ ಕುರಿತಂತೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು, ಆಯೋಗಕ್ಕೆ ದೂರು ದಾಖಲಾಗಿದ್ದರಿಂದ ತೇಜಸ್ವಿ ಸೂರ್ಯ ಅವರನ್ನು ವಿಚಾರಣೆಗೆ ಕರೆದಿದ್ದೆ. ಇದೀಗ ಯುವತಿಯೊಬ್ಬರು ಮಹಿಳಾ ಆಯೋಗಕ್ಕೆ ಪತ್ರ ಬರೆದು ತೇಜಸ್ವಿ ವಿರುದ್ಧ ಟ್ವೀಟರ್‌ನಲ್ಲಿ ನಾನು ಆರೋಪ ಮಾಡಿಲ್ಲ. ತೇಜಸ್ವಿ ಸೂರ್ಯ ಹಾಗೂ ನಾನು ಉತ್ತಮ ಸ್ನೇಹಿತರು. ನಮ್ಮಿಬ್ಬರ ತೇಜೋವಧೆ ಮಾಡಲು ಈ ರೀತಿ ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಕೆಲವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ತೇಜಸ್ವಿ ಸೂರ್ಯ ಅವರ ರಾಜಕೀಯ ಭವಿಷ್ಯವನ್ನು ಹಾಳು ಮಾಡುವುದಕ್ಕೆ ಈ ರೀತಿ ಮಾಡಿದ್ದಾರೆ. ನನ್ನ ಪರವಾಗಿ ಯಾರಾದರೂ ದೂರು ಕೊಟ್ಟಿದ್ದರೆ ಅದನ್ನು ವಜಾಗೊಳಿಸಿ ಎಂದು ಯುವತಿ ಸ್ವತಃ ಇಮೇಲ್‌ ಮಾಡಿದ್ದಾರೆ. ಯುವತಿಯೇ ಪತ್ರ ಕಳಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಿದಾಗ ಅವರು ಅಗತ್ಯವಾದ ದಾಖಲೆಗಳನ್ನು ಸಹ ಒದಗಿಸಿದ್ದಾರೆ. ಅಲ್ಲದೆ ಖುದ್ದು ದೂರವಾಣಿ ಕರೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ… ಕುಮಾರ್‌ ಅವರಿಗೂ ಪತ್ರ ಬರೆದಿದ್ದಾರೆ. ಯುವತಿಯೇ ಸ್ಪಷ್ಟನೆ ನೀಡಿರುವುದರಿಂದ ಈ ಪ್ರಕರಣ ವಜಾಗೊಳಿಸಲಾಗಿದೆ ಎಂದು ಹೇಳಿದರು.