ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರನ್ನು ಸಮರ ಭೂಮಿಗೆ ನಿಯೋಜಿಸಲು ಭಾರತ ಮುಂದಾಗಿದೆ. ತನ್ಮೂಲಕ ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಶತ್ರುಪಾಳೆಯದ ಜತೆ ಹೋರಾಡುವ ಹೊಣೆ ವಹಿಸಿರುವ ಕೆಲವೇ ದೇಶಗಳ ಸಾಲಿಗೆ ಸೇರ್ಪಡೆಯಾಗಲು ತುದಿಗಾಲಿನಲ್ಲಿ ನಿಂತಿದೆ.
ನವದೆಹಲಿ(ಜೂ.05): ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರನ್ನು ಸಮರ ಭೂಮಿಗೆ ನಿಯೋಜಿಸಲು ಭಾರತ ಮುಂದಾಗಿದೆ. ತನ್ಮೂಲಕ ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಶತ್ರುಪಾಳೆಯದ ಜತೆ ಹೋರಾಡುವ ಹೊಣೆ ವಹಿಸಿರುವ ಕೆಲವೇ ದೇಶಗಳ ಸಾಲಿಗೆ ಸೇರ್ಪಡೆಯಾಗಲು ತುದಿಗಾಲಿನಲ್ಲಿ ನಿಂತಿದೆ.
ಕಳೆದ ವರ್ಷವಷ್ಟೇ ಭಾರತೀಯ ವಾಯುಪಡೆ ಮೂವರು ಮಹಿಳೆಯರಿಗೆ ಯುದ್ಧ ವಿಮಾನ ಚಾಲನೆ ಹೊಣೆಗಾರಿಕೆ ವಹಿಸುವ ಮೂಲಕ ಹೊಸ ದಾಖಲೆ ಬರೆದಿತ್ತು. ಇದೀಗ ಭೂಸೇನೆ ಕೂಡ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಸದ್ಯ ಪುರುಷರ ಆಡುಂಬೊಲವಾಗಿರುವ ಸಮರಾಂಗಣದಲ್ಲಿ ಮಹಿಳೆಯರನ್ನು ಯೋಧರನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ವಿವಿಧ ಜವಾಬ್ದಾರಿ ಹಂಚಲು ಸೇನೆ ನಿರ್ಧರಿಸಿದೆ.
ಮಹಿಳೆಯರನ್ನು ಯೋಧರನ್ನಾಗಿ ನೇಮಕ ಮಾಡಲು ನಾನಂತೂ ರೆಡಿ. ಈ ಬಗ್ಗೆ ಸರ್ಕಾರದ ಜತೆ ಚರ್ಚಿಸಲಾಗುತ್ತಿದೆ. ಮಹಿಳೆಯರ ನಿಯೋಜನೆ ಪ್ರಕ್ರಿಯೆಯೂ ಆರಂಭವಾಗಿದೆ. ಆರಂಭಿಕ ಹಂತದಲ್ಲಿ ಮಿಲಿಟರಿ ಪೊಲೀಸ್ ಯೋಧರ ಹುದ್ದೆಗೆ ಮಹಿಳೆಯರನ್ನು ನಿಯೋಜಿಸಲಾಗುತ್ತದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸದ್ಯ ಸೇನೆಯ ವೈದ್ಯಕೀಯ, ಕಾನೂನು, ಶಿಕ್ಷಣ, ಸಿಗ್ನಲ್ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ಮಹಿಳೆಯರಿಗೆ ಅವಕಾಶವಿದೆ. ಆದರೆ ಸಮರ ಭೂಮಿಯಲ್ಲಿ ಶತ್ರು ಪಾಳೆಯದ ಜತೆ ಹೋರಾಡುವ ಹೊಣೆಗಾರಿಕೆ ಇಲ್ಲ. ಜರ್ಮನಿ, ಆಸ್ಪ್ರೇಲಿಯಾ, ಕೆನಡಾ, ಅಮೆರಿಕ, ಬ್ರಿಟನ್, ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ನಾರ್ವೆ, ಸ್ವೀಡನ್ ಹಾಗೂ ಇಸ್ರೇಲ್ನಲ್ಲಿ ಮಹಿಳಾ ಯೋಧರು ಇದ್ದಾರೆ.
ಯೋಧರಾಗುವ ನಿಟ್ಟಿನಲ್ಲಿ ಮೊದಲು ಮಿಲಿಟರಿ ಪೊಲೀಸ್ ಯೋಧರಾಗಿ ನಿಯುಕ್ತಿಗೊಳ್ಳಲಿರುವ ಮಹಿಳೆಯರು ಸೇನಾ ಕಂಟೋನ್ಮೆಂಟ್, ಸಂಸ್ಥೆಗಳ ಭದ್ರತಾ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಯೋಧರು ನಿಯಮ ಹಾಗೂ ನಿಯಂತ್ರಣ ಉಲ್ಲಂಘಿಸುವುದನ್ನು ತಡೆಯಲಿದ್ದಾರೆ. ಶಾಂತಿ ಹಾಗೂ ಸಮರದ ಸಂದರ್ಭದಲ್ಲಿ ಯೋಧರು, ಸರಕುಗಳ ಸಾಗಣೆ, ಯುದ್ಧ ಕೈದಿಗಳ ನಿರ್ವಹಣೆ, ನಾಗರಿಕ ಪೊಲೀಸರಿಗೆ ಸಹಾಯದಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
