ಬೆಳಗಾವಿ (ಆ. 02):  ದೇಶದಲ್ಲೇ ಇದೇ ಮೊದಲ ಬಾರಿಗೆ ಬೆಳಗಾವಿ ಸೇರಿದಂತೆ ದೇಶದ ಐದು ಕಡೆಗಳಲ್ಲಿ ನಡೆಯುತ್ತಿರುವ ಮಹಿಳಾ ಸೈನಿಕರ ಭರ್ತಿ ರ್ಯಾಲಿಗೆ ಗುರುವಾರ ಚಾಲನೆ ದೊರೆತಿದ್ದು, ದಕ್ಷಿಣ ಭಾರತದ ಐದು ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಿಂದ ಸಾವಿರಾರು ಯುವತಿಯರ ದಂಡೇ ಕುಂದಾನಗರಿಗೆ ಆಗಮಿಸಿದೆ.

ಸುರಿವ ಮಳೆಯನ್ನು ಲೆಕ್ಕಿಸದೇ ಬೆಳಗ್ಗೆ 6 ಗಂಟೆಗೆಯಿಂದಲೇ ದೈಹಿಕ ಪರೀಕ್ಷೆ ಪ್ರಕ್ರಿಯೆ ನಡೆಯುವ ಕ್ಯಾಂಪ್‌ ಪ್ರದೇಶದಲ್ಲಿನ ಮರಾಠ ಲಘು ಪದಾತಿದಳ ಕೇಂದ್ರದ ಶಿವಾಜಿ ಮೈದಾನದತ್ತ ಯುವತಿಯರು ದಾಪುಗಾಲು ಹಾಕುತ್ತಿದ್ದರು. ರಾರ‍ಯಲಿಯ ಕುರಿತು ಸರಿಯಾದ ಮಾಹಿತಿ ಇಲ್ಲದೇ ಆಗಮಿಸಿದ ನೂರಾರು ಯುವತಿಯರು, ಭರ್ತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೇ ಹಿಂತಿರುಗಬೇಕಾಯಿತು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌, ನಿಕೋಬಾರ್‌, ಪುದುಚೇರಿಯಿಂದ ಯುವತಿಯರು ಆಗಮಿಸಿದ್ದಾರೆ.

ಮೈದಾನದ ಪ್ರವೇಶ ದ್ವಾರದಲ್ಲೇ ಅಭ್ಯರ್ಥಿಗಳ ಶೈಕ್ಷಣಿಕ ದಾಖಲಾತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿತ್ತು. ಬಳಿಕ ದೈಹಿಕ ಪರೀಕ್ಷೆ ನಡೆಸಲಾಯಿತು. ಇನ್ನೂ ನಾಲ್ಕು ದಿನ ಈ ರಾರ‍ಯಲಿ ನಡೆಯಲಿದ್ದು, ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಲಿಖಿತ ಪರೀಕ್ಷೆಯಲ್ಲಿ ಪಾಸಾಗುವ ಅಭ್ಯರ್ಥಿಗಳು ಸೇನೆಗೆ ಆಯ್ಕೆಯಾಗಲಿದ್ದಾರೆ.