ಬೆಂಗಳೂರು(ಜೂನ್ 15): ರಸ್ತೆಯಲ್ಲಿ ಹುಡುಗಿಯರಿಗೆ ಏನೇ ಚುಡಾಯಿಸಿದರೂ ಯಾರೂ ಏನೂ ಕೇಳೋದಿಲ್ಲ ಎಂಬ ಧಿಮಾಕಿನ ಪೋಲಿಗಳಿಗೆ ಎಚ್ಚರಿಕೆಯ ಸುದ್ದಿ ಇದು. ತನ್ನನ್ನು ಚುಡಾಯಿಸಿದ ಲಾರಿ ಚಾಲಕನಿಗೆ ಯುವತಿಯೊಬ್ಬಳು ಸರಿಯಾಗಿ ಗೂಸಾ ಕೊಟ್ಟ ಘಟನೆ ನಗರದಲ್ಲಿ ನಡೆದಿದೆ. ಇಂದು ಗುರುವಾರ ಸುಮನಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಯುವತಿಯನ್ನ ಕೆಎಂಎಫ್ ಲಾರಿ ಚಾಲಕ ಕೆಣಕಿದ್ದಾನೆ. ಫಿಲಂ ಶೈಲಿಯಲ್ಲಿ "ಏ ಬುಲ್ ಬುಲ್ ದಾರಿ ಬಿಡಾಕಿಲ್ವಾ?" ಎಂದು ಚುಡಾಯಿಸಿದ್ದಾನೆ. ಇದರಿಂದ ಕೋಪಗೊಂಡ ಆ ಯುವತಿಯು ಲಾರಿ ಚಾಲಕನ ಮುಖಕ್ಕೆ ಪಂಚ್ ಕೊಟ್ಟಿದ್ದಾಳೆ. ಪೊಲೀಸರ ಮುಂದೆಯೇ ಆತನಿಗೆ ಗೂಸಾ ಕೊಡುತ್ತಾಳೆ.

ಅಂಬರೀಷ್ ಅಭಿಮಾನಿ ಅಂಬರೀಷ್:
ಆರೋಪಿಯ ಹೆಸರು ಅಂಬರೀಷ್. ಆತ ರೆಬೆಲ್ ಸ್ಟಾರ್ ಅಂಬರೀಷ್ ಅವರ ಅಭಿಮಾನಿಯೂ ಹೌದು. ನಾಗರಹಾವು ಸಿನಿಮಾದಲ್ಲಿ ನಟ ಅಂಬರೀಷ್ ಪಾತ್ರಧಾರಿಯಿಂದ ಬರುವ "ಹೇ ಬುಲ್ ಬುಲ್" ಡೈಲಾಗ್ ಸಿಕ್ಕಾಪಟ್ಟೆ ಫೇಮಸ್. ಈ ಅಂಬರೀಷ್ ಅಭಿಮಾನಿ ಅದೇ ಡೈಲಾಗ್ ಹರಿಬಿಟ್ಟು ಮಹಿಳೆಯಿಂದ ಚೆನ್ನಾಗೇ ಗೂಸಾ ತಿಂದಿದ್ದಾನೆ. ಈ ಘಟನೆಯಾದಾಗ ಆತ ಕುಡಿದಿದ್ದನೆನ್ನಲಾಗಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಎಸ್'ಐ ಉಮೇಶ್ ಉಡುಪ ಅವರಿಗೆ ಮಹಿಳೆಯು ದೂರು ನೀಡಿದ್ದಾರೆ.