ಗುರುಗ್ರಾಮ್(ಅ.9): ವೃತ್ತಿಯಿಂದ ಆಕೆ ಫ್ಯಾಶನ್ ಡಿಸೈನರ್, ಗಂಡ ಮತ್ತು ಮಕ್ಕಳ ಜೊತೆಗಿನ ಚೆಂದದ ಸಂಸಾರ ಆಕೆಯದ್ದು. ಆದರೆ ಆಕೆ ನೆಲೆಸಿದ್ದ ಅಪಾರ್ಟಮೆಂಟ್ ಗೆ ಬೆಂಕಿ ಬಿದ್ದಿದ್ದೇ ಬಿದ್ದಿದ್ದು, ಆಕೆಯನ್ನು ಬಲಿ ಪಡೆದಿದ್ದಷ್ಟೇ ಅಲ್ಲ, ಆಕೆಯ ಸಂಸಾರದ ನಗುವನ್ನೂ ಕಸಿದುಕೊಂಡಿತು.

ಹೌದು, ರಾಷ್ಟ್ರ ರಾಜಧಾನಿ ನವದೆಹಲಿಯ ಪಕ್ಕದಲ್ಲೇ ಇರುವ ಗುರುಗ್ರಾಮ್ ದಲ್ಲಿ ಟುಲಿಪ್ ಆರೆಂಜ್ ಎಂಬ ಅಪಾರ್ಟಮೆಂಟ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಪಾರ್ಟಮೆಂಟ್ ನ 10ನೇ ಮಹಡಿಯಲ್ಲಿ ವಾಸವಿದ್ದ ಸ್ವಾತಿ ಗರ್ಗ್ ಮನಸ್ಸು ಮಾಡಿದ್ದರೆ ತಾವೊಬ್ಬರೇ ಅಪಾರ್ಟಮೆಂಟ್ ನಿಂದ ಸುರಕ್ಷಿತವಾಗಿ ಹೊರ ಬರಬಹುದಿತ್ತು.

ಆದರೆ ಅಪಾರ್ಟಮೆಂಟ್ ನ ಇತರರನ್ನೂ ಎಚ್ಚರಿಸುವ ಉದ್ದೇಶದಿಂದ ಸ್ವಾತಿ ಎಲ್ಲರ ಮನೆಗಳಿಗೂ ಹೋಗಿ ಬೆಂಕಿ ಹೊತ್ತುಕೊಂಡಿರುವ ವಿಷಯ ತಿಳಿಸಿದ್ದಾರೆ. ಸ್ವಾತಿ ಎಚ್ಚರಿಕೆಯಿಂದ ಎಲ್ಲರೂ ಅಪಾರ್ಟಮೆಂಟ್ ನಿಂದ ಸುರಕ್ಷಿತವಾಗಿ ಹೊರ ಬಂದಿದ್ದಾರೆ.

ಆದರೆ ಎಲ್ಲರ ಜೀವ ಉಳಿಸಿದ ಸ್ವಾರತಿ ಮಾತ್ರ ಅಪಾರ್ಟಮೆಂಟ್ ನಿಂದ ಹೊರಬಂದಿದ್ದು ಮಾತ್ರ ಹೆಣವಾಗಿ. ಹೌದು, ತನ್ನ ನೆರೆಹೊರೆಯವರ ಪ್ರಾಣ ಉಳಿಸಿದ ಸ್ವಾತಿ ಕೊನೆ ಕ್ಷಣದಲ್ಲಿ 10ನೇ ಮಹಡಿಯ ಗೇಟ್ ಬಂದ್ ತೆರೆಯದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಸ್ವಾತಿ ಗರ್ಗ್ ತಮ್ಮ ಮಗಳನ್ನು ಕೂಡ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಆದರೆ ಸ್ವಾತಿ ಅಪಾರ್ಟಮೆಂಟ್ ನಿಮದ ಹೊರಬರಲು ಪ್ರಯತ್ನಿಸುತ್ತಿದ್ದಾಗ ಕೊನೆ ಕ್ಷಣದಲ್ಲಿ 10ನೇ ಮಹಡಿಯ ಗೇಟ್ ಮುಚ್ಚಿಕೊಂಡಿದೆ. ಇದರಿಂದ ಸ್ವಾತಿ ಹೊರ ಬರಲಾರದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಸ್ವಾತಿ ಅವರ ನಿಸ್ವಾರ್ಥ ಮನೋಭಾವ ಮತ್ತು ಧೈರ್ಯದ ಫಲವಾಗಿ ಅಪಾರ್ಟಮೆಂಟ್ ನಿವಾಸಿಗಳ ಜೀವ ಉಳಿದಿದ್ದು, ಸ್ವಾತಿ ಗರ್ಗ್ ಮಾತ್ರ ಬದುಕುಳಿಯದೇ ಇರುವುದು ದುರಂತವೇ ಸರಿ.