ಹೈದರಾಬಾದ್(ನ.04): ಅಪರಿಚಿತ ವ್ಯಕ್ತಿಯೋರ್ವ ಮಹಿಳಾ ತಹಶೀಲ್ದಾರ್ ಅವರನ್ನು ಅವರ ಕಚೇರಿಯಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್'ನ ಮಹಿಳಾ ತಹಶೀಲ್ದಾರ್ ವಿಜಯಾ ರೆಡ್ಡಿ ಎಂಬುವವರನ್ನು ಅಪರಿಚಿತ ವ್ಯಕ್ತಿಯೋರ್ವ ಆಕೆಯ ಕಚೇರಿಯಲ್ಲೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.

ಜಮೀನಿನ ವ್ಯಾಜ್ಯದ ಕುರಿತು ಮಾತನಾಡಲು ತಹಶೀಲ್ದಾರ್ ‌ವಿಜಯಾ ಅವರ ಕೋಣೆ ಪ್ರವೇಶಿಸಿದ್ದ ವ್ಯಕ್ತಿ, ಸುಮಾರು ಅರ್ಧ ಗಂಟೆಗಳ ವಾಗ್ವಾದದ ಬಳಿಕ ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.

ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ತಹಶೀಲ್ದಾರ್ ವಿಜಯಾ ರೆಡ್ಡಿ ಸಹಾಯಕಕೆ ಅಂಗಲಾಚಿದಾಗ, ಆಕೆಯ ವಾಹನ ಚಾಲಕ ಸಹಾಯಕ್ಕೆ ಧಾವಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಚಾಲಕನಿಗೆ ಸಣ್ಣುಪುಟ್ಟ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯದ ಬಳಿಕ ಸ್ಥಳದಲ್ಲಿ ಉಂಟಾದ ಗಲಿಬಿಲಿ ವಾತಾವರಣದ ಲಾಭ ಪಡೆದ ಕೊಲೆಗಾರ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.