ಹೃದೋಗದಿಂದ 1993ರಲ್ಲಿ ಪತಿ ಸಾವನ್ನಪ್ಪಿದ್ದ ನಂತರ ಕುಟುಂಬವನ್ನು ನಡೆಸಲು ಅಸಹಾಯಕರಾಗಿದ್ದ ರಾಣಿ, ಅನುಕಂಪದ ನೌಕರಿ ಒದಗಿಸುವಂತೆ ಬಿಎಸ್‌ಎಫ್‌'ಗೆ ಮನವಿ ಪತ್ರ ಸಲ್ಲಿಸಿದ್ದರು. ಇದರಿಂದ ಅವರಿಗೆ 1995ರಲ್ಲಿ ಬಿಎಸ್‌ಎಫ್ ಕ್ಯಾಂಟೀನ್‌'ನಲ್ಲಿ ತಾತ್ಕಾಲಿಕವಾಗಿ ಸಹಾಯಕಿ ನೌಕರಿ ನೀಡಲಾಗಿತ್ತು.
ಬೆಂಗಳೂರು(ಆ.21): ಅಂತೂ ಇಂತೂ 21 ವರ್ಷಗಳ ಕಾನೂನು ಹೋರಾಟದ ನಂತರ ಗಡಿ ಭದ್ರತಾ ಪಡೆ (ಬಿಎಸ್ಎಫ್) ನೌಕರನ ಕುಟುಂಬದ ಸದಸ್ಯರಿಗೆ ಅನುಕಂಪದ ಉದ್ಯೋಗ ಬಂತು.
ಹೌದು, ಬಿಎಸ್ಎಫ್ ಕ್ಯಾಂಟೀನ್'ನಲ್ಲಿ ಸುಮಾರು 20 ವರ್ಷಗಳ ಕಾಲ ಬಾಣಸಿಗನಾಗಿ ದುಡಿದಿದ್ದ ರಾಜು, ಅಡುಗೆ ತಯಾರಿಕೆ ವೇಳೆ ಹೊರಹೊಮ್ಮುತ್ತಿದ್ದ ಹೊಗೆ ಸೇವನೆಯಿಂದ ಹೃದ್ರೋಗಕ್ಕೆ ಗುರಿಯಾಗಿದ್ದರು. ಬಿಎಸ್ಎಫ್ ಸರ್ಜರಿಗೆ ಹಣ ಪಾವತಿಸದ ಪರಿಣಾಮ ಚಿಕಿತ್ಸೆ ಪಡೆಯಲಾಗದೆ ಅವರು ಸಾವನ್ನಪ್ಪಿದ್ದರು. ಪತಿ ಸಾವಿನ ನಂತರ ರಾಜು ಪತ್ನಿ ರಾಣಿ ಅನುಕಂಪದ ಉದ್ಯೋಗಕ್ಕಾಗಿ 1996ರಿಂದ ಬಿಎಸ್ಎಫ್ ವಿರುದ್ಧ ನ್ಯಾಯಾಲಯದ ಒಳಗೆ ಹಾಗೂ ಹೊರಗಡೆ ಹೋರಾಟ ಮಾಡುತ್ತಿದ್ದರು. ಆದರೆ, ಅನುಕಂಪದ ನೌಕರಿ ಮಾತ್ರ ಮರೀಚಿಕೆಯಾಗಿತ್ತು. ಇದೀಗ ಬಿಎಸ್ಎಫ್ ರಾಣಿ ಅವರ ಪುತ್ರಿಗೆ ಅನುಕಂಪದ ನೌಕರಿ ನೀಡಲು ತೀರ್ಮಾನಿಸಿ, ಆ ಕುರಿತು ರಾಜ್ಯ ಹೈಕೋರ್ಟ್ಗೆ ಸ್ಪಷ್ಟಪಡಿಸಿದೆ. ಅಷ್ಟೆ ಅಲ್ಲದೆ, ಆ ಕುರಿತು ನೌಕರಿ ನೀಡುವುದನ್ನು ದೃಢೀಕರಿಸಿ ರಾಣಿ ಅವರಿಗೆ ಪತ್ರವೂ ನೀಡಿದೆ. ಇದರೊಂದಿಗೆ ಅನುಕಂಪದ ನೌಕರಿಗಾಗಿ ನಡೆಸಿದ ಹೋರಾಟ ತಾರ್ಕಿಕ ಅಂತ್ಯ ಕಂಡಂತಾಗಿದೆ.
ಈ ಮಧ್ಯೆ ಹೃದ್ರೋಗದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆಯಲು ಸೂಕ್ತ ಕಾಲದಲ್ಲಿ ಬಿಎಸ್ಎಫ್ ಹಣ ಪಾವತಿಸದ ಕಾರಣ ಪತಿ ಸಾವನ್ನಪ್ಪಿದ್ದಾರೆ. ಇದಕ್ಕಾಗಿ ತಮಗೆ ಪರಿಹಾರ ಧನ ನೀಡಲು ಬಿಎಸ್ಎಫ್'ಗೆ ನಿರ್ದೇಶಿಸಬೇಕು ಎಂಬುವ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸಲು ರಾಣಿ ನಿರ್ಧರಿಸಿದ್ದಾರೆ. ಹೃದೋಗದಿಂದ 1993ರಲ್ಲಿ ಪತಿ ಸಾವನ್ನಪ್ಪಿದ್ದ ನಂತರ ಕುಟುಂಬವನ್ನು ನಡೆಸಲು ಅಸಹಾಯಕರಾಗಿದ್ದ ರಾಣಿ, ಅನುಕಂಪದ ನೌಕರಿ ಒದಗಿಸುವಂತೆ ಬಿಎಸ್ಎಫ್'ಗೆ ಮನವಿ ಪತ್ರ ಸಲ್ಲಿಸಿದ್ದರು. ಇದರಿಂದ ಅವರಿಗೆ 1995ರಲ್ಲಿ ಬಿಎಸ್ಎಫ್ ಕ್ಯಾಂಟೀನ್'ನಲ್ಲಿ ತಾತ್ಕಾಲಿಕವಾಗಿ ಸಹಾಯಕಿ ನೌಕರಿ ನೀಡಲಾಗಿತ್ತು. ಆದರೆ, ಸೇವೆ ಕಾಯಂಗೊಳಿಸದ ಹಿನ್ನೆಲೆಯಲ್ಲಿ 2014ರಲ್ಲಿ ಲೀಗಲ್ ನೋಟಿಸ್ ಜಾರಿ ಮಾಡಿ ಕಾಯಂ ಉದ್ಯೋಗ ನೀಡಲು ಒತ್ತಾಯಿಸಿದ್ದಕ್ಕೆ ನೌಕರಿಯಿಂದಲೇ ಅವರನ್ನು ವಜಾಗೊಳಿಸಲಾಗಿತ್ತು. ಇದರಿಂದ ಹೈಕೋರ್ಟ್ ಕದ ತಟ್ಟಿದ್ದ ರಾಣಿ, ಕ್ಯಾಂಟೀನ್ ಸಿಬ್ಬಂದಿಯಾಗಿ ಪುನರ್ ನೇಮಿಸಿ ಕಾಯಂಗೊಳಿಸಬೇಕು. ಇಲ್ಲವೇ ನಮ್ಮ ಪುತ್ರಿಗೆ ಉದ್ಯೋಗ ಕಲ್ಪಿಸಬೇಕು. ಹಾಗೆಯೇ, ಪತಿಯ ಸಾವಿಗೆ ಕಾರಣವಾಗಿದ್ದರಿಂದ ವಾರ್ಷಿಕ ಶೇ.12ರಷ್ಟು ಬಡ್ಡಿ ಸಮೇತ 7.5 ಲಕ್ಷ ರು. ಪರಿಹಾರ ಒದಗಿಸಲು ಬಿಎಸ್ಎಫ್'ಗೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇತ್ತೀಚೆಗೆ ಅರ್ಜಿ ವಿಚಾರಣೆಗೆ ಬಂದ ವೇಳೆ ಬಿಎಸ್ಎಫ್ ಪರ ವಕೀಲರು ವಾದಿಸಿ, ‘ರಾಣಿ ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ಕಲ್ಪಿಸಲಾಗುವುದು’ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೋರ್ಟ್, ‘2013ರ ಜ.12ರಂದು ಇದೇ ಪ್ರಸ್ತಾವನೆ ಮಾಡಿದ್ದ ಬಿಎಸ್ಎಫ್, ಈಗಲೂ ಅದೇ ಅದೇ ನಿಲುವು ಹೊಂದಿದೆಯೇ ಎಂಬುದನ್ನು ಅಧಿಕಾರಿಗಳಿಂದ ಖಚಿತಪಡಿಸಿಕೊಂಡು ತಿಳಿಸಬೇಕು’ ಸೂಚಿಸಿತ್ತು. ಅದರಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬಂದ ಬಿಎಸ್ಎಫ್ ಪರ ವಕೀಲರು, ‘ರಾಣಿ ಅವರ ಪುತ್ರಿಗೆ ನೌಕರಿ ಕಲ್ಪಿಸುವುದಾಗಿ ಸ್ಪಷ್ಟಪಡಿಸಿ ಬೆಂಗಳೂರಿನ ಬಿಎಸ್ಎಫ್-ಎಸ್'ಟಿಸಿ ಘಟಕದ ಮಹಾ ನಿರೀಕ್ಷಕರು ಪತ್ರ ನೀಡಿದ್ದಾರೆ’ ಎಂದು ತಿಳಿಸಿದರು. ಆ ಪತ್ರವನ್ನು ಕೋರ್ಟ್ಗೂ ಸಲ್ಲಿಸಿದರು. ನ್ಯಾಯಪೀಠವು ಆ ಪತ್ರವನ್ನು ದಾಖಲಿಸಿಕೊಂಡು, ಅನುಕಂಪದ ಉದ್ಯೋಗ ಕಲ್ಪಿಸಲು ನಿರ್ದೇಶಿಸುವಂತೆ ರಾಣಿ ಕೋರಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿತು.
ಇದೇ ವೇಳೆ ರಾಣಿ ಪರ ವಾದ ಮಂಡಿಸಿದ ವಕೀಲ ಎಚ್.ಸುನೀಲ್ ಕುಮಾರ್, ‘ರಾಜು ಅವರ ಸರ್ಜರಿಗೆ ಹಣ ಬಿಡುಗಡೆ ಮಾಡದೆಅವರ ಸಾವಿಗೆ ಬಿಎಸ್ಎಫ್ ಕಾರಣವಾಗಿದೆ. ಇದರಿಂದ ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ವಿಷಯದ ಮೇಲೆ ವಾದ ಮಂಡಿಸುತ್ತೇನೆ’ ಎಂದರು.
