ಮೆಕ್ಸಿಕೋ[ಆ.28]: ಹಠಯೋಗ ಸಾಧನೆಗೆ ಮುಂದಾದ ವಿದ್ಯಾರ್ಥಿಯೊಬ್ಬಳು 80 ಅಡಿ ಎತ್ತರದ ಕಟ್ಟಡದ ಬಾಲ್ಕನಿಯಿಂದ ಆಯ ತಪ್ಪಿ ಬಿದ್ದು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

23 ವರ್ಷ ವಯಸ್ಸಿನ ಅಲೆಕ್ಸಾ ಟೆರ್ರಾಝಾ ಹಠಯೋಗ ಮಾಡಲು ಹೋಗಿ ಜೀವನಪರ್ಯಂತ ನಡೆದಾಡುವುದೇ ಕಷ್ಟಎನ್ನುವ ಸ್ಥಿತಿ ತಂದುಕೊಂಡ ವಿದ್ಯಾರ್ಥಿನಿ. ಇಲ್ಲಿನ ಸ್ಯಾನ್‌ ಪೆಡ್ರೋ ಎಂಬ ಅಪಾರ್ಟ್‌ಮೆಂಟ್‌ನ 6ನೇ ಅಂತಸ್ತಿನ ಮನೆಯಲ್ಲಿ ವಾಸವಿರುವ ಈಕೆ, ಕಟ್ಟಡದ ಬಾಲ್ಕನಿಯ ಕಂಬಿ ಸಹಾಯ ಪಡೆದು ತಲೆಕೆಳಗಾಗಿ ಹಠಯೋಗ ಸಾಧನೆಗೆ ಮುಂದಾಗಿದ್ದಳು. ಆಕೆಯ ಈ ಅಪಾಯಕಾರಿ ಸಾಹಸವನ್ನು ಜೊತೆಗಿದ್ದ ಸ್ನೇಹಿತೆ ಫೋಟೋ ತೆಗೆದಿದ್ದಾಳೆ. ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಕೂಡಲೇ ಶಸ್ತ್ರಚಿಕಿತ್ಸೆಗೊಳಪಡಿಸಲಾಗಿದೆ.

11 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೇರವೇರಿಸಿದ ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಈಕೆಗೆ ಮೂರ್ನಾಲ್ಕು ನಡೆದಾಡುವುದೇ ಕಷ್ಟಸಾಧ್ಯವಾಗಿದೆ. ಮೊಣಕಾಲು ಮತ್ತು ಪಾದದ ಭಾಗದಲ್ಲಿ 110ಕ್ಕೂ ಹೆಚ್ಚು ಕಡೆ ಮೂಳೆ ಮುರಿತಕ್ಕೊಳಗಾಗಿವೆ. ತಲೆ ಮತ್ತು ಸೋಂಟದ ಮೂಳೆಗಳಿಗೂ ಹಾನಿಯಾಗಿದ್ದು ಚೇತರಿಸಿಕೊಳ್ಳಲು ಸಾಕಷ್ಟುಸಮಯಬೇಕು. ಈಗಲೂ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.