ರಾಂಚಿ[ನ.09]: ಝಾರ್ಖಂಡ್‌ನ ಜಾಮ್ತಾಡಾ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಕಾಮುಕರ ತಂಡವೊಂದು ಮಹಿಳೆಯೊಬ್ಬಳನ್ನು ಅತ್ಯಾಚಾರಗೈದು, ಬಳಿಕ ಆಕೆಯ ಗುಪ್ತಾಂಗಕ್ಕೆ ದೊಣ್ಣೆ ಹಾಕಿ ಮೃಗೀಯವಾಗಿ ವರ್ತಿಸಿದ್ದಾರೆ. ಕಾಮುಕರ ಈ ಘೋರ ಕೃತ್ಯದಿಂದ ಗಂಭೀರವಾಗಿ ಗಾಯಗೊಂಡ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. 


ಘಟನೆಯ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸ್ ಅಧೀಕ್ಷಕ ಬಿಎನ್‌ ಸಿಂಗ್ 'ಈ ಘಟನೆಯು ಜಿಲ್ಲೆಯ ನಾರಾಯಣಪುರ ಠಾಣಾ ವ್ಯಾಪ್ತಿಯ ಉದಯ್‌ಪುರ್‌ನಲ್ಲಿ ನಡೆದಿದೆ. ಘಟನೆಯ ಮಾಹಿತಿ ಲಭ್ಯವಾದ ಮರುಕ್ಷಣವೇ ಪೊಲೀಸರು ತನಿಖೆ ಆರಂಭಿಸಿದ್ದು, ಯುವತಿಯ ಮಾಜಿ ಗಂಡ ಉದಯ್ ಎಂಬವರನ್ನು ಬಂಧಿಸಲಾಗಿದೆ. ಅತ್ಯಾಚಾರ ನಡೆಸಿದ ಇನ್ನಿತರ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ’ ಎಂದಿದ್ದಾರೆ. 

'ಯುವತಿಯು ಪಬಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾಳಿ ಪೂಜೆಯಲ್ಲಿ ನಡೆಯುತ್ತಿದ್ದ ಸಂತಾಲಿ ಯಾತ್ರೆ ವೀಕ್ಷಿಸಲು ತೆರಳಿದ್ದು, ಅಲ್ಲಿ ಆಕೆಯ ಮಾಜಿ ಗಂಡ ಕೂಡಾ ಆಗಮಿಸಿದ್ದ. ಆತ ತನ್ನ ಗೆಳೆಯರೊಂದಿಗೆ ಸೇರಿ ಯುವತಿಯನ್ನು ಬಲವಂತವಾಗಿ ಹತ್ತಿರದ ಹೊಲಕ್ಕೆ ಹೊತ್ತೊಯ್ದು, ಅತ್ಯಾಚಾರ ನಡೆಸಿದ್ದಾನೆ. ಇದಾದ ಬಳಿಕ ಆಕೆಯ ಗುಪ್ತಾಂಗಕ್ಕೆ ಹತ್ತಿರದಲ್ಲಿದ್ದ ದೊಣ್ಣೆ ಹಾಕಿದ್ದಾರೆ. ಈ ವೇಳೆ ನೋವಿನ ತೀವ್ರತೆಗೆ ಯುವತಿ ಪ್ರಜ್ಞಾಹೀನಳಾಗಿದ್ದಾಳೆ. ಮರುದಿನ ಯುವತಿಯ ನರಳಾಟದ ಧ್ವನಿ ಕೇಳಿ ಅಲ್ಲಿಗಾಗಮಿಸಿದ ಸ್ಥಳೀಯರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಘಿ ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯು ಆಸ್ಪತ್ರೆಗೆ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದಾಳೆ' ಎಂದು ಪೊಲೀಸರು ತಿಳಿಸಿದ್ದಾರೆ. 

'ಮಹಿಳೆಯು ಕೊನೆಯುಸಿರೆಳೆಯುವುದಕ್ಕೂ ಮೊದಲು ಸ್ಥಳೀಯರ ಬಳಿ ತನ್ನ ಮಾಜಿ ಗಂಡನೇ ತನ್ನ ಇಬ್ಬರು ಗೆಳೆಯರ ಜೊತೆಗೂಡಿ ಈ ದುಷ್ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾಳೆ' ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.