Asianet Suvarna News Asianet Suvarna News

ಅಧಿವೇಶನ: ಸರ್ಕಾರವೇ ಬೆಳಗಾವಿಗೆ ಶಿಫ್ಟ್‌

ಸಂಪೂರ್ಣ ಸರ್ಕಾರವೇ ಇದೀಗ ಮತ್ತೊಂದು ಕಡೆ ಶಿಪ್ಟ್ ಆಗಿದೆ. ಸದ್ಯ ಕರ್ನಾಟಕದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಪೂರ್ಣ ಸರ್ಕಾರ ಬೆಳಗಾವಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದೆ.

Winter Session Government Shift To Belagavi
Author
Bengaluru, First Published Dec 10, 2018, 11:12 AM IST

ಬೆಳಗಾವಿ :  ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿದೂಗಿಸಲು ಕೆಲ ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಘೋಷಣೆ ಇನ್ನೂ ಜಾರಿಗೆ ಬಂದಿಲ್ಲದಿದ್ದರೂ ಚಳಿಗಾಲದ ಅಧಿವೇಶನದ ನೆಪದಲ್ಲಿ ಪೂರ್ಣ ಸರ್ಕಾರ ಬೆಳಗಾವಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದೆ.

ಸೋಮವಾರದಿಂದ ಈ ತಿಂಗಳ 21ರವರೆಗೆ ನಡೆಯಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನಕ್ಕಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಎಲ್ಲಾ ಸಚಿವರು, ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಮುಖವಾಗಿ ವಿಧಾನಸಭೆ, ವಿಧಾನಪರಿಷತ್‌ನ ಎರಡೂ ಸಚಿವಾಲಯ ಸೇರಿದಂತೆ ಸಂಪೂರ್ಣ ಸರ್ಕಾರ 10 ದಿನಗಳ ಮಟ್ಟಿಗೆ ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರ ಆಗಿದೆ.

ಸುಮಾರು 300 ಮಂದಿ ಹಿರಿಯ ಅಧಿಕಾರಿಗಳು, 500ಕ್ಕೂ ಹೆಚ್ಚು ಮಂದಿ ಕಿರಿಯ ಅಧಿಕಾರಿಗಳು, 1200 ಸಿಬ್ಬಂದಿ, 5 ಪೊಲೀಸ್‌ ಸಿಬ್ಬಂದಿ ನಿಯೋಜನೆಗೊಂಡಿದ್ದು, ಹಿರಿಯ ಅಧಿಕಾರಿಗಳು, ಶಾಸಕರು, ಪತ್ರಕರ್ತರಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನಕ್ಕೆ 17.57 ಕೋಟಿ ರು. ವೆಚ್ಚ ನಿಗದಿ ಪಡಿಸಲಾಗಿದೆ.

ಉತ್ತರ ಕರ್ನಾಟಕದ ಬಗ್ಗೆ ಮುಖ್ಯಮಂತ್ರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ, ಕರ್ನಾಟಕ ವಿದ್ಯುತ್‌ ಮಗ್ಗ ನಿಗಮ, ಉತ್ತರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ರಚನೆ, ಮಾನವ ಹಕ್ಕುಗಳ ಆಯೋಗದ ಒಬ್ಬರು ಸದಸ್ಯರ ಕಚೇರಿ, ಒಬ್ಬ ಮಾಹಿತಿ ಹಕ್ಕು ಆಯುಕ್ತರ ಕಚೇರಿ, ಪ್ರಾಚ್ಯ ವಸ್ತು ನಿರ್ದೇಶನಾಲಯವನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಯಾವ ಕಚೇರಿ ಎಲ್ಲಿಗೆ ಸ್ಥಳಾಂತರಿಸಬೇಕು ಎಂಬ ಬಗ್ಗೆ ನಿರ್ಧರಿಸಲು ಉಪ ಸಮಿತಿಯನ್ನೂ ರಚಿಸಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಗತಿ ಕಾಣಲಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಜನತೆಯ ಆಗ್ರಹ, ಆಕ್ರೋಶ ಎರಡೂ ನಿಂತಿಲ್ಲ. ಇದೀಗ ಅಧಿವೇಶನದ ಹೆಸರಿನಲ್ಲಿ ಹತ್ತು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಸರ್ಕಾರ ಬೆಳಗಾವಿಗೆ ಶಿಫ್ಟ್‌ ಆಗಿದೆ.

Follow Us:
Download App:
  • android
  • ios