ಹೈದ್ರಾಬಾದ್‌: ರಾಜ್ಯದ ಜನರಲ್ಲಿ ಪಕ್ಷ ಮತ್ತು ಸರ್ಕಾರದ ಬಗ್ಗೆ ಅತ್ಯುತ್ತಮ ಅಭಿಪ್ರಾಯ ಇದೆ ಎಂಬ ಸಮೀಕ್ಷಾ ವರದಿಗಳನ್ನು ಬಲವಾಗಿ ನಂಬಿರುವ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್‌ ಅವರು ಇದೇ ತಿಂಗಳ ಮಧ್ಯಭಾಗದ ವೇಳೆಗೆ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದೇ ವರ್ಷದ ನವೆಂಬರ್‌- ಡಿಸೆಂಬರ್‌ ಅವಧಿಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅದೇ ಅವಧಿಯಲ್ಲಿ ತಮ್ಮ ರಾಜ್ಯದಲ್ಲೂ ಚುನಾವಣೆ ನಡೆಸಲು ಅನುವಾಗುವಂತೆ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷ ಕಾರ್ಯತಂತ್ರ ರೂಪಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯೊಂದರಲ್ಲಿ, ತಕ್ಷಣವೇ ಚುನಾವಣೆ ನಡೆದರೆ ರಾಜ್ಯದ 119 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 100ರಲ್ಲಿ ಟಿಆರ್‌ಎಸ್‌ ಗೆಲ್ಲಲಿದೆ ಎಂದು ಹೇಳಲಾಗಿತ್ತು. ಇದೇ ಸಮೀಕ್ಷೆಯಲ್ಲಿ ರಾಜ್ಯದ ಜನರು ಸರ್ಕಾರದ ಪರ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂಬ ಅಂಶವೂ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದರ ಲಾಭ ಪಡೆಯುವ ನಿಟ್ಟಿನಲ್ಲಿ ಮುಂದಿನ ವರ್ಷದ ಏಪ್ರಿಲ್‌- ಮೇ ಅವಧಿಯಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಹಿಂದೂಡಲು, ರಾಜ್ಯ ವಿಧಾನಸಭೆಯನ್ನೇ ವಿಸರ್ಜಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಲಿ ವಿಧಾನಸಭೆಯಲ್ಲಿ ಟಿಆರ್‌ಎಸ್‌ ಶಾಸಕರ ಸಂಖ್ಯೆ 90 ಇದೆ.