ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಸಿಗುವುದೋ ಇಲ್ಲವೋ, ಈ ಬಗ್ಗೆ  ಇಂದು ಮಹತ್ವದ ತೀರ್ಪು ಪ್ರಕಟಗೊಳ್ಳಲಿದೆ. 

ನವದೆಹಲಿ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷದ ಒಳಗಿನ ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕು ಎಂದು ಕೋರಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶುಕ್ರವಾರ ತನ್ನ ತೀರ್ಪನ್ನು ಪ್ರಕಟಿಸಲಿದೆ. 

ಸುಪ್ರೀಂಕೋರ್ಟ್ ಸಿಜೆ ದೀಪಕ್ ಮಿಶ್ರಾ ಅವರಿದ್ದ ಪಂಚ ಸದಸ್ಯ ಪೀಠ, 800 ವರ್ಷಗಳ ಹಳೆಯ ಪದ್ಧತಿಯನ್ನು ಪ್ರಶ್ನಿಸಿ ಭಾರತೀಯ ಯುವ ವಕೀಲರ ಸಂಘಟನೆ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಆಗಸ್ಟ್‌ನಲ್ಲಿ ಕಾಯ್ದಿರಿಸಿತ್ತು. 

ಇದಕ್ಕೂ ಮುನ್ನ ವಿಚಾರಣೆ ವೇಳೆ ಸಂವಿಧಾನದ ಪ್ರಕಾರ ಪುರುಷರಂತೆ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸುವ ಅಧಿಕಾರವಿದೆ. ನಿಯಮಗಳನ್ನು ರೂಪಿಸಿ ಇದನ್ನು ನಿರಾಕರಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು. 

ಯಾವ ಆಧಾರದ ಮೇಲೆ ದೇವಾಲಯದ ಅಧಿಕಾರಿಗಳು ಮಹಿಳೆಯರಿಗೆ ಪ್ರವೇಶ ನಿರಾಕರಿಸುತ್ತಾರೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧ. ಒಮ್ಮೆ ನೀವು ಅದನ್ನು ಸಾರ್ವಜನಿಕರಿಗೆ ತೆರೆದಿಟ್ಟ ಮೇಲೆ ಯಾರು ಬೇಕಾದರೂ ಪ್ರವೇಶಿಸಬಹುದು. ಒಂದು ವೇಳೆ ದೇವಾಲಯಕ್ಕೆ ಪುರುಷರಿಗೆ ಅವಕಾಶ ನೀಡಿದರೆ ಮಹಿಳೆಯರಿಗೂ ನೀಡಬೇಕು ಎಂದು ನ್ಯಾ| ದೀಪಕ್ ಮಿಶ್ರಾ ಅವರು ಹೇಳಿದ್ದರು.