ಕ್ರೂರ, ಅಮಾನವೀಯ ಕೃತ್ಯ ಹಾಗೂ ನಾಗರಿಕತೆಯ ಎಲ್ಲೆ ಮೀರಿದ ಕೃತ್ಯ ಇದಾಗಿದ್ದು, ನಿಸ್ಸಂದಿಗ್ಧ ಪ್ರತಿಕ್ರಿಯೆ ನೀಡಲು ಅರ್ಹವಾಗಿದೆ. ಪ್ರಶಸ್ತ ಸಮಯ ಹಾಗೂ ಸ್ಥಳದಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದೇವೆ’ ಎಂದು ಭಾರತ ಗುಡುಗಿದೆ.

ನವದೆಹಲಿ(ಮೇ.02): ಕಾಶ್ಮೀರ ಗಡಿಯಲ್ಲಿ ಭಾರತೀಯ ಸೈನಿಕರ ಶಿರಚ್ಛೇದ ಹಿನ್ನೆಲೆಯಲ್ಲಿ ಪಾಕ್‌ಗೆ ತಕ್ಕ ತಿರುಗೇಟು ನೀಡುವಂತೆ ಕೇಂದ್ರ ಸರ್ಕಾರವನ್ನು ಹುತಾತ್ಮರ ಕುಟುಂಬಗಳು ಆಗ್ರಹಿಸಿವೆ. ಹುತಾತ್ಮ ಯೋಧ ಪ್ರೇಮ್ ಸಾಗರ್ ಪುತ್ರಿ ಸರೋಜ್‌ಳಂತೂ, ‘ನನ್ನ ತಂದೆಯ ವೀರ ಮರಣಕ್ಕೆ ಪ್ರತಿಯಾಗಿ 50 ಪಾಕಿಗಳ ತಲೆ ಉರುಳಿಸಬೇಕು’ ಎಂದು ಆಕ್ರೋಶಭರಿತಳಾಗಿ ನುಡಿದಿದ್ದಾಳೆ.

ಗಡಿಯಲ್ಲಿ 250 ಮೀಟರ್‌ನಷ್ಟು ಒಳಗೆ ಬಂದು ಭಾರತೀಯ ಯೋಧರಿಬ್ಬರನ್ನು ಹತ್ಯೆ ಮಾಡಿದ್ದೂ ಅಲ್ಲದೆ ಶಿರಚ್ಛೇದ ಮಾಡಿದ ಪ್ರಕರಣ ಸಂಬಂಧ ಕೆಂಡಾಮಂಡಲಗೊಂಡಿರುವ ಭಾರತೀಯ ಸೇನೆ, ಪಾಕಿಸ್ತಾನಕ್ಕೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದೆ. ‘ಕ್ರೂರ, ಅಮಾನವೀಯ ಕೃತ್ಯ ಹಾಗೂ ನಾಗರಿಕತೆಯ ಎಲ್ಲೆ ಮೀರಿದ ಕೃತ್ಯ ಇದಾಗಿದ್ದು, ನಿಸ್ಸಂದಿಗ್ಧ ಪ್ರತಿಕ್ರಿಯೆ ನೀಡಲು ಅರ್ಹವಾಗಿದೆ. ಪ್ರಶಸ್ತ ಸಮಯ ಹಾಗೂ ಸ್ಥಳದಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದೇವೆ’ ಎಂದು ಭಾರತ ಗುಡುಗಿದೆ.

ಇದಕ್ಕೆ ಎಂದಿನಂತೆ ಪಾಕಿಸ್ತಾನ ಸೇನೆ ಕೂಡ ನಿರಾಕರಣೆಯ ಧಾಟಿ ಮುಂದುವರೆಸಿದ್ದು, ‘ನಾವು ಯಾವತ್ತೂ ಈ ರೀತಿಯ ಕೃತ್ಯ ಎಸಗಿಲ್ಲ. ಆರೋಪಕ್ಕೆ ಪೂರಕವಾದ ಸಾಕ್ಷ್ಯವನ್ನು ಭಾರತ ಒದಗಿಸಬೇಕು. ಭಾರತ ಯಾವುದೇ ದುಸ್ಸಾಹಸ ತೋರಿದರೆ ಸೂಕ್ತ ಸ್ಥಳ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡು ಅದೇ ರೀತಿಯ ಉತ್ತರವನ್ನು ನೀಡುತ್ತೇವೆ’ ಎಂದು ಉದ್ಧಟತನದ ಉತ್ತರ ನೀಡಿದೆ.

ಹಾಟ್‌ಲೈನ್‌ಲ್ಲಿ ಭಾರತ ಗರಂ

ಸೋಮವಾರದ ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 11.30ಕ್ಕೆ ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಹಾಟ್‌ಲೈನ್ ಸಂಪರ್ಕ ಏರ್ಪಟ್ಟಿತ್ತು. ದಾಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತದ ಡಿಜಿಎಂಒ ಲೆ ಜ ಎ.ಕೆ. ಭಟ್, ‘ಈ ದಾಳಿ ಕ್ರೂರ ಹಾಗೂ ಅಮಾನವೀಯ ಕೃತ್ಯ. ನಾಗರಿಕತೆಯ ಎಲ್ಲೆ ಮೀರಿದ್ದಾಗಿದೆ. ಈ ಬಗ್ಗೆ ನಿಸ್ಸಂದಿಗ್ಧ ಪ್ರತಿಕ್ರಿಯೆ ನೀಡಬೇಕಾದೀತು’ ಎಂದು ತಾಕೀತು ಮಾಡಿದರು.

‘ಗಡಿಯಲ್ಲಿ ‘ಬಾರ್ಡರ್ ಆ್ಯಕ್ಷನ್ ಟೀಮ್’ (ಬ್ಯಾಟ್) ದಾಳಿ ನಡೆಸುವಾಗ ಪಾಕಿಸ್ತಾನ ಸೇನೆ ಗುಂಡಿನ ಮಳೆಗರೆಯುವ ಮೂಲಕ ಸಂಪೂರ್ಣ ಬೆಂಬಲ ನೀಡಿದೆ’ ಎಂದು ದೂರಿದರು. ಅಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಬ್ಯಾಟ್ ತಂಡದ ಉಪಸ್ಥಿತಿಗೂ ಆಕ್ಷೇಪ ವ್ಯಕ್ತಪಡಿಸಿದರು.