ಬೆಂಗಳೂರು :  ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಅತೃಪ್ತ ಶಾಸಕರ ನೇತೃತ್ವ ವಹಿಸಿ ಈಗಾಗಲೇ ಒಂದು ಕಾಲನ್ನು ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಿಂದ ಹೊರಗಿಟ್ಟಿರುವ ಶಾಸಕ ರಮೇಶ್‌ ಜಾರಕಿಹೊಳಿ ಅವರ ಮನವೊಲಿಸಲು ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಮೇಶ್‌ ಜಾರಕಿಹೊಳಿಗೆ ಸಚಿವ ಸ್ಥಾನದ ಪ್ರಸ್ತಾಪ ಮುಂದಿಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. 

ಆದರೆ, ಈಗಾಗಲೇ ಬಿಜೆಪಿ ಜೊತೆ ಮಾನಸಿಕವಾಗಿ ಗುರುತಿಸಿಕೊಂಡಿರುವ ರಮೇಶ್‌ ಜಾರಕಿಹೊಳಿ ಅವರು ಕುಮಾರಸ್ವಾಮಿ ಅವರ ಈ ಪ್ರಸ್ತಾಪಕ್ಕೆ ಒಪ್ಪುತ್ತಾರಾ ಎಂಬುದು ಕುತೂಹಲಕರವಾಗಿದೆ. ರಮೇಶ್‌ ಜಾರಕಿಹೊಳಿ ಅವರು ಕಾಂಗ್ರೆಸ್‌ ಶಾಸಕರಾಗಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಆ ಪಕ್ಷದ ನಾಯಕರು ಹೇಗೆ ಒಪ್ಪುತ್ತಾರೆ ಎಂಬುದು ಮಾತ್ರ ಇನ್ನೂ ಅಸ್ಪಷ್ಟವಾಗಿದೆ.

ಕಾಂಗ್ರೆಸ್‌ ನಾಯಕರೊಂದಿಗೆ ಮಾನಸಿಕವಾಗಿ ದೂರವಾಗಿದ್ದರೂ ರಮೇಶ್‌ ಅವರು ಕುಮಾರಸ್ವಾಮಿ ಅವರೊಂದಿಗೆ ಮಾತ್ರ ಉತ್ತಮ ಸಂಬಂಧ ಹೊಂದಿದ್ದರು. ಇದನ್ನು ಸ್ವತಃ ಕುಮಾರಸ್ವಾಮಿ ಅವರೂ ಬಹಿರಂಗವಾಗಿಯೇ ಹೇಳಿದ್ದರು.

ಇದೀಗ ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ರಮೇಶ್‌ ಜಾರಕಿಹೊಳಿ ಅವರನ್ನು ಹೇಗಾದರೂ ಮಾಡಿ ಸಮಾಧಾನಪಡಿಸಬೇಕು ಎಂಬ ನಿಲುವಿಗೆ ಬಂದಿರುವ ಕುಮಾರಸ್ವಾಮಿ ಅವರು ಸಚಿವ ಸ್ಥಾನ ನೀಡುವ ಉದ್ದೇಶ ಹೊಂದಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ನಾಯಕರೊಂದಿಗೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಬಯಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.