ಹಾವೇರಿ :  ಲೋಕಸಭಾ ಚುನಾವಣೆ  ಮುಕ್ತಾಯವಾಗಿದ್ದು, ಫಲಿತಾಂಶಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ.  ಇದೇ ವೇಳೆ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ಹೇಳಿದ್ದು, ಇದೇ ವೇಳೆ ಶ್ರೀ ಕ್ಷೇತ್ರ  ಮೈಲಾರದ ಕಾರಣೀಕ ನುಡಿಯಲಾಗಿದೆ. 

ಫೆಬ್ರುವರಿ 22 ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರಣೀಕ ನುಡಿದಿದ್ದು, "ಕಬ್ಬಿಣದ ಸರಪಳಿ ಹರಿತಲೇ ಪರಾಕ್"  ಎಂದು ಹೇಳಲಾಗಿದೆ. ವೃತದಾರಿ ರಾಮಣ್ಣ ಗೋರವಯ್ಯ ಕಾರಣೀಕ ಹೇಳಿದ್ದು, ಕಾರಣೀಕದ ಬಗ್ಗೆ ಶ್ರೀಕ್ಷೇತ್ರ ಮೈಲಾರದ ಧರ್ಮಾಧಿಕಾರಿ ವ್ಯಾಖ್ಯಾನ ಮಾಡಿದ್ದಾರೆ. 

ಸುವರ್ಣ ನ್ಯೂಸ್. ಕಾಂಗೆ  ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್ ಪ್ರತಿಕ್ರಿಯಿಸಿ ಸದ್ಯದಲ್ಲೇ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಕಬ್ಬಿಣದ ಸರಪಳಿ ಎಂದರೆ ಸಮ್ಮಿಶ್ರ ಸರ್ಕಾರದ ಸಂಕೇತ. ಹೀಗೆಂದರೆ ಸಮ್ಮಿಶ್ರದ ಕೊಂಡಿ ಹರಿದಂತೆ. ಇದು ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರನ ಕಾರಣೀಕದ ಸಾರಾಂಶ ಎಂದು ಹೇಳಿದ್ದಾರೆ.

ಕಳೆದ ವರ್ಷ ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯತೆಯ ಬಗ್ಗೆಯೂ ಕಾರಣೀಕ ನುಡಿಯಲಾಗಿತ್ತು. "ಆಕಾಶ ಗಿಡಕ್ಕೆ ಗಿಣಿ ಕಿತ್ತಿತ್ತಲೇ ಪರಾಕ್"  ಎಂದು ಕಳೆದ ವರ್ಷ ಕಾರಣಿಕ ನುಡಿದಿದ್ದು, ಕಳೆದ ವರ್ಷದ ಕಾರಣೀಕ  ನಿಜವಾಗಿತ್ತು. ಅದರಂತೆ ಈ ಬಾರಿಯೂ ಕಾರಣೀಕ ನುಡಿದಿದ್ದು, ಪ್ರಸಕ್ತ ವರ್ಷದ ಕಾರಣೀಕವೂ ಸತ್ಯವಾಗುತ್ತದೆ ಎನ್ನುವ ನಂಬಿಕೆ ಇದೆ.