ಚೀನಾ 124 ಬಿಲಿಯನ್ ಡಾಲರ್ ಹಣವನ್ನು, ಅಂದರೆ ಸುಮಾರು 8 ಲಕ್ಷ ಕೋಟಿ ರೂಪಾಯಿ, ಹೂಡಿಕೆ ಮಾಡುತ್ತಿರುವುದು ಸುಮ್ಮನೆ ಅಲ್ಲ. ಬರೀ ಸ್ನೇಹಕ್ಕೋಸ್ಕರ ಯಾವುದೇ ಲಾಭ ವಿಲ್ಲದೇ ಒಂದು ದೇಶ ಇಷ್ಟು ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡುತ್ತದಾ? ಸಿಪೆಕ್ ಯೋಜನೆಯ ದೀರ್ಘಕಾಲದ ಯೋಜನೆಯ ವಿವರ ತನ್ನ ಬಳಿ ಇದ್ದು, ಅದರಲ್ಲಿ ಚೀನಾದ ಉದ್ದೇಶ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಡಾನ್ ಪತ್ರಿಕೆ ಹೇಳಿಕೊಂಡಿದೆ.
ನವದೆಹಲಿ(ಮೇ 16): ನಿನ್ನೆ ಚೀನಾ ದೇಶವು ಭಾರೀ ವೈಭವಯುತವಾಗಿ "ಬೆಲ್ಟ್ ಅಂಡ್ ರೋಡ್ ಫೋರಂ" ಕಾರ್ಯಕ್ರಮವನ್ನು ಆಯೋಜಿಸಿತ್ತು. ಪಾಕಿಸ್ತಾನವನ್ನೊಳಗೊಂಡಂತೆ 29 ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ಮುಖಂಡರು ಇದರಲ್ಲಿ ಪಾಲ್ಗೊಂಡಿದ್ದರು. ಚೀನಾ ತಾನೊಬ್ಬ ಜಾಗತಿಕ ಮುಂಚೂಣಿಯ ನಾಯಕ ಎಂದು ಈ ಕಾರ್ಯಕ್ರಮದ ಮೂಲಕ ಇಡೀ ವಿಶ್ವಕ್ಕೇ ಸಾರಿತು. ಭಾರತ ಮಾತ್ರ ತನ್ನ ಪ್ರತಿನಿಧಿಯನ್ನು ಈ ಕಾರ್ಯಕ್ರಮಕ್ಕೆ ಕಳುಹಿಸಲಿಲ್ಲ. ಅಷ್ಟೇ ಅಲ್ಲ, ಪಾಕಿಸ್ತಾನವನ್ನೂ ಸೇರಿಸಿ ಚೀನಾದ ಬೃಹತ್ ಯೋಜನೆಯಲ್ಲಿ ಒಳಗೊಂಡಿರುವ ರಾಷ್ಟ್ರಗಳು ಸಾಲದಲ್ಲಿ ಮುಳುಗಬೇಕಾಗುತ್ತದೆ ಎಂದು ಭಾರತ ಸಾರಿಸಾರಿ ಎಚ್ಚರಿಸಿತು. ಇದೀಗ ಭಾರತದ ಅನುಮಾನವನ್ನು ಗಟ್ಟಿಗೊಳಿಸುವ ಸುದ್ದಿ ಬಂದಿದೆ. ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್(ಸಿಪೆಕ್) ಯೋಜನೆಯ ಹಿಂದಿರುವ ಚೀನಾದ ಮಾಸ್ಟರ್'ಪ್ಲಾನ್'ನ ವಾಸ್ತವ ಸತ್ಯವನ್ನು ಚೀನಾದ ಮಾಧ್ಯಮವೊಂದು ಬಯಲಿಗೆಳೆದಿದೆ. ಸಿಪೆಕ್ ಯೋಜನೆ ಮೂಲಕ ಪಾಕಿಸ್ತಾನದಲ್ಲಿ ತನ್ನ ವಸಾಹತು ನಿರ್ಮಿಸಿಕೊಳ್ಳುವ ಹುನ್ನಾರವನ್ನು ಚೀನಾ ಮಾಡಿದೆ ಎಂದು ದಿ ಡಾನ್ ಪತ್ರಿಕೆ ವಿಶ್ಲೇಷಿಸಿದೆ.
ಚೀನಾದ "ಬೆಲ್ಟ್ ಅಂಡ್ ರೋಡ್ ಫೋರಂ"ನಲ್ಲಿ ಸಿಪೆಕ್ ಯೋಜನೆ ಒಂದು ಪ್ರಮುಖ ಭಾಗ. ಇದರಲ್ಲಿ ಚೀನಾ 124 ಬಿಲಿಯನ್ ಡಾಲರ್ ಹಣವನ್ನು, ಅಂದರೆ ಸುಮಾರು 8 ಲಕ್ಷ ಕೋಟಿ ರೂಪಾಯಿ, ಹೂಡಿಕೆ ಮಾಡುತ್ತಿರುವುದು ಸುಮ್ಮನೆ ಅಲ್ಲ. ಬರೀ ಸ್ನೇಹಕ್ಕೋಸ್ಕರ ಯಾವುದೇ ಲಾಭ ವಿಲ್ಲದೇ ಒಂದು ದೇಶ ಇಷ್ಟು ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡುತ್ತದಾ? ಸಿಪೆಕ್ ಯೋಜನೆಯ ದೀರ್ಘಕಾಲದ ಯೋಜನೆಯ ವಿವರ ತನ್ನ ಬಳಿ ಇದ್ದು, ಅದರಲ್ಲಿ ಚೀನಾದ ಉದ್ದೇಶ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಡಾನ್ ಪತ್ರಿಕೆ ಹೇಳಿಕೊಂಡಿದೆ.
ಸಿಪೆಕ್ ಯೋಜನೆ ಏನು?
ಮೇಲ್ನೋಟಕ್ಕೆ ಸಿಪೆಕ್ ಯೋಜನೆಯು ಪಾಕಿಸ್ತಾನದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವುದಾಗಿದೆ. ಆಫ್ರಿಕಾ, ಪಶ್ಚಿಮ ಏಷ್ಯಾ ಪ್ರದೇಶಗಳಿಗೆ ಪ್ರಮುಖ ಸಂಪರ್ಕದ ಕೊಂಡಿಯಾಗಲಿರುವ ಗ್ವಾದರ್ ಬಂದರಿನಿಂದ ಈ ಕಾರಿಡಾರ್ ಆರಂಭವಾಗುತ್ತದೆ. ಗ್ವಾದರ್'ನಿಂದ ಚೀನಾದವರೆಗಿನ ಪಾಕಿಸ್ತಾನದ ಭಾಗದಲ್ಲಿ ಅಲ್ಲಲ್ಲಿ ಎಕನಾಮಿಕ್ ಕಾರಿಡಾರ್ ನಿರ್ಮಾಣ ಮಾಡುವುದಾಗಿದೆ. ಆಫ್ರಿಕಾ, ಪಶ್ಚಿಮ ಏಷ್ಯಾ ದೇಶಗಳೊಂದಿಗೆ ತನ್ನ ವ್ಯವಹಾರ ವೃದ್ಧಿಸುವುದು ಚೀನಾದ ಉದ್ದೇಶ.
ಆದರೆ, ಯೋಜನೆಯ ರಿಯಲ್ ಅಜೆಂಡಾವೇ ಬೇರೆಯಾಗಿದೆ. 2030ರಷ್ಟರಲ್ಲಿ ಪಾಕಿಸ್ತಾನವು ಚೀನಾದ ಪಾಲಿಗೆ ಆರ್ಥಿಕ ವಸಾಹತು ಆಗಲಿದೆ ಎಂದು ಡಾನ್ ಪತ್ರಿಕೆ ಹೇಳಿದೆ. "ಸಾವಿರಾರು ಎಕರೆ ಕೃಷಿ ಜಮೀನುಗಳು ಚೀನಾದ ಕಂಪನಿ ಪಾಲಾಗಲಿವೆ. ಪೇಶಾವರ, ಕರಾಚಿ ಮೊದಲಾದ ಪ್ರಮುಖ ನಗರಗಳಲ್ಲಿ ಚೀನಾ ದೇಶವು ಪರಿವೇಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಲಿದೆ. ನಗರಗಳ ಪ್ರಮುಖ ರಸ್ತೆ ಮತ್ತು ಮಾರುಕಟ್ಟೆಗಳಲ್ಲಿ ಚೀನಾ ದೇಶವೇ ಸಿಸಿಟಿವಿಗಳನ್ನು ಅಳವಡಿಸಿ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಫೈಬರ್ ಆಪ್ಟಿಕ್ ಕೇಬಲ್ ವ್ಯವಸ್ಥೆ ಮೂಲಕ ಟಿವಿ ಪ್ರಸಾರ, ಇಂಟರ್ನೆಟ್ ಹಕ್ಕುಗಳು ಚೀನಾದ ನಿಯಂತ್ರಣದಲ್ಲೇ ಇರಲಿದೆ..." ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.
ಅಷ್ಟೇ ಅಲ್ಲ, ಮಾಧ್ಯಮ ಸಹಯೋಗದ ಮೂಲಕ ಚೀನಾದ ಸಂಸ್ಕೃತಿಯನ್ನು ಪಾಕಿಸ್ತಾನದ ಪಸರಿಸಿ ನಿಧಾನವಾಗಿ ಅದನ್ನು ತನ್ನತ್ತ ಒಗ್ಗಿಸಿಕೊಳ್ಳುವುದು ಚೀನಾದ ತಂತ್ರವಾಗಿದೆ. ಪಾಕಿಸ್ತಾನದ ಆರ್ಥಿಕತೆಗೆ ತಳಹದಿಯಾಗಿರುವ ಕೃಷಿ ಜಮೀನಿನ ಮೇಲೆ ಚೀನಾದ ಕಂಪನಿಗಳು ನಿಧಾನವಾಗಿ ನಿಯಂತ್ರಣ ಸಾಧಿಸಲಿವೆಯಂತೆ. ಪಾಕಿಸ್ತಾನದ ಪಶ್ಚಿಮ ಭಾಗದಲ್ಲಿ ಯಥೇಚ್ಛವಾಗಿರುವ ಖನಿಜ ಸಂಪತ್ತನ್ನು ಲೂಟಿ ಮಾಡಲು ಚೀನಾ ಪ್ಲಾನ್ ಮಾಡಿದೆ.
ಯೋಜನೆಯಿಂದ ಪಾಕಿಸ್ತಾನಕ್ಕೆ ಚೀನಾದ ತಂತ್ರಜ್ಞಾನದ ಲಾಭ ಸಿಗುತ್ತದೆ ಎಂಬ ವಾದವಿದೆ. ಆದರೆ, ಚೀನಾ ತನ್ನ ತಂತ್ರಜ್ಞಾನವನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡೋದಿಲ್ಲ. ಜುಟ್ಟು ತನ್ನ ಕೈಯಲ್ಲೇ ಹಿಡಿದುಕೊಳ್ಳುತ್ತದೆ. ಅಲ್ಲದೇ, ಯೋಜನೆಯಿಂದ ಹಣದುಬ್ಬರ ಪ್ರಮಾಣವು 11ಕ್ಕೂ ಹೆಚ್ಚು ಇರಲಿದೆ ಎಂದು ಚೀನಾವೇ ಒಪ್ಪಿಕೊಂಡಿದೆ. ಯೋಜನೆಗೆ ಒಂದಷ್ಟು ಭಾಗದ ಹಣವನ್ನು ಪಾಕಿಸ್ತಾನವೂ ನೀಡಬೇಕಿದೆ. ಮೊದಲೇ ಸಾಲದ ಶೂಲದಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದ ಸಾಲದ ಹೊರೆಯನ್ನು ಹೊರಲು ಸಾಧ್ಯವಾಗುತ್ತದಾ? ಪಾಕಿಸ್ತಾನ ಆರ್ಥಿಕವಾಗಿ ಅಶಕ್ತವಾಗುತ್ತದೆ. ಚೀನಾ ತನ್ನ ಬೇಳೆ ಬೇಯಿಸಿಕೊಳ್ಳಲು ಇನ್ನಷ್ಟು ಸುಲಭವಾಗುತ್ತದೆ.
