ಮದ್ದೂರು: ನಾವು ನೋಟಾ ಮತ ಚಲಾಯಿಸುತ್ತೇವೆ ಇಲ್ಲವೇ ಬಿಜೆಪಿಗೆ ಮತ ಹಾಕುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಮತ ನೀಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರ ಎದುರೇ ಕಾರ್ಯಕರ್ತರು ಘೋಷಣೆ ಮಾಡಿದ ಪ್ರಸಂಗ ಬುಧವಾರ ಜರುಗಿತು.

ಪಟ್ಟಣದ ಶ್ರೀವೆಂಕಟೇಶ್ವರ ರೆಸಿಡೆನ್ಸಿ ಸಭಾಂಗಣದಲ್ಲಿ ಮಂಡ್ಯ ಲೋಕಸಭಾ ಉಪ ಚುನಾವಣೆ ಕುರಿತಂತೆ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕೆಲವು ಕಾರ್ಯಕರ್ತರು ನಾಯಕರ ವಿರುದ್ಧ ಹರಿಹಾಯ್ದರು. ಈ ವೇಳೆ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿ ಕಾರ್ಯಕರ್ತರು ಮುಖಂಡರು ಆಸೀನರಾಗಿದ್ದ ವೇದಿಕೆ ಹತ್ತಿರ ನುಗ್ಗಿ ಬಿಜೆಪಿ ಪರ ಘೋಷಣೆ ಕೂಗಿದರು.

ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರನ್ನು ಬೆಂಬಲಿಸುವಂತೆ ಪಕ್ಷದ ವರಿಷ್ಠರ ಸೂಚನೆಯಾಗಿದೆ. ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಪಂಗಿ ಕಾರ್ಯಕರ್ತರಿಗೆ ಕರೆ ನೀಡಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರ ಗುಂಪು ಅವರೊಂದಿಗೆ ಮಾತಿನ ಚಕಮಕಿ ನಡೆಸಿ ತರಾಟೆಗೆ ತೆಗೆದುಕೊಂಡರು.