ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸ್ಥಾಪಿಸಿರುವ ಭಗವಾನ್‌ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಯನ್ನು ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವ​Üರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮ​ವಾರ ಸಂಜೆ ಶ್ರೀ ಮಠದಲ್ಲಿ ಪ್ರದಾನ ಮಾಡಿದರು.

ಪ್ರಶಸ್ತಿ 10 ಲಕ್ಷ ನಗದು, ಸ್ಮರಣಿಕೆ ಹಾಗೂ ಫಲ ತಾಂಬೂಲ ಒಳಗೊಂಡಿದೆ. ರಾಜ್ಯ ಸರ್ಕಾರ ಮಹಾವೀರ ಜಯಂತಿ ಆಚರಿಸುವುದರ ಜೊತೆಗೆ ಪ್ರಶಸ್ತಿ ಸ್ಥಾಪಿಸಿದ್ದು ಮೊದಲ ಗೌರವ ಶ್ರೀಗಳಿಗೆ ಲಭಿಸಿದೆ. ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭಗವಾನ್‌ ಮಹಾವೀರರ ಹೆಸರಿನಲ್ಲಿ ಅತ್ಯುನ್ನತ ಸೇವೆ ಮಾಡಿದವರಿಗೆ ಶಾಂತಿ ಪ್ರಶಸ್ತಿ ನೀಡಲು ಉದ್ದೇಶಿಸಿದ್ದು ಈ ಪ್ರಶಸ್ತಿಯನ್ನು ಶ್ರೀಗಳು ಸ್ವೀಕರಿಸಿರುವುದಕ್ಕೆ ತಮ್ಮ ನಮನ ಸಲ್ಲಿಸಿದರು.

ಶ್ರೀಗಳಿಗೆ ಈಗಾಗಲೇ ಬಸವ ಪ್ರಶಸ್ತಿ, ಕರ್ನಾಟಕ ರತ್ನ, ಕನ್ನಡ ರಾಜ್ಯೋತ್ಸವ, ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಇನ್ನು ಉಳಿದಿರುವುದು ಭಾರತ ರತ್ನ ಪ್ರಶಸ್ತಿ ಮಾತ್ರ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಈಗಾಗಲೇ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ತಾವು ಕೂಡ ಇನ್ನೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಭಾರತ​ರತ್ನ ನೀಡುವಂತೆ ಒತ್ತಾಯಿಸುವೆ. ಭಾರತ ರತ್ನ ಪ್ರಶಸ್ತಿಗೆ ಸಿದ್ಧಗಂಗಾ ಶ್ರೀಗಳಿಗಿಂತ ಅರ್ಹರು ಇನ್ನೊಬ್ಬರಿಲ್ಲ ಎಂದು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ಸಿದ್ಧಗಂಗಾ ಶ್ರೀಗಳು ಅನೇಕ ವರ್ಷಗಳಿಂದ ಈ ನಾಡಿನ ಎಲ್ಲಾ ಜಾತಿಯ ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿ​ದ್ದಾರೆ. ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಶತಮಾನಗಳ ಕಾಲ ತಳ ಸಮುದಾಯದ ಜನರು ಹಾಗೂ ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಇದರಿಂದ ಸಮಾಜ​ದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ದೊಡ್ಡ ಕಂದಕ ಸೃಷ್ಟಿಯಾಯಿತು. ಯಾವ ಸಮಾಜದಲ್ಲಿ ಮೌಲ್ಯಯುತ ಶಿಕ್ಷಣ ಸಿಗುತ್ತದೆಯೋ ಆ ಸಮಾಜ ನಾಗರಿಕ ಸಮಾಜ​ವಾಗುತ್ತದೆ. ಇದನ್ನು ಶ್ರೀಗಳು ಜೀವನದುದ್ದುಕ್ಕೂ ಮಾಡಿ​ಕೊಂಡು ಬಂದಿದ್ದಾರೆ ಎಂದು ಪ್ರಶಂಸಿಸಿದರು.

ಶ್ರೀಮಠದಲ್ಲಿ 10 ಸಾವಿರ ಮಕ್ಕಳಿಗೆ ಆಶ್ರಯ ಸಿಕ್ಕಿದೆ. ಇವರ ದೂರದೃಷ್ಟಿಯ ಫಲವಾಗಿ ಸಿದ್ಧಗಂಗಾ ಮಠ ಇಷ್ಟೊಂದು ಉನ್ನತ ಮಟ್ಟಕ್ಕೆ ಬಂದಿದೆ. ಗ್ರಾಮೀಣ ಪ್ರದೇ​ಶದ ಜನರು, ಬಡವರು, ತಳಸಮುದಾಯದ ಮಕ್ಕಳಿಗೆ ಶಿಕ್ಷಣ, ವಸತಿ, ಊಟ ಕೊಡಿಸುವಲ್ಲಿ ಶ್ರೀಗಳ ಶ್ರಮ ದೊಡ್ಡದು. ಭಗವಾನ್‌ ಮಹಾವೀರರು ಕರ್ನಾಟಕಕ್ಕೆ ಸೀಮಿ​ತ​ರಾಗಿದವರಲ್ಲ. ಇಡೀ ವಿಶ್ವಕ್ಕೆ ಅಹಿಂಸೆ ಮಂತ್ರ ಹೇಳಿದ್ದಾರೆ. ಸ್ವಾಮೀಜಿ ಇಡೀ ದೇಶಕ್ಕೆ ಶಾಂತಿಧೂತರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇದು ರಾಷ್ಟ್ರೀಯ ಪ್ರಶಸ್ತಿಯಾಗಬೇಕೆಂದು ಸಚಿವೆ ಉಮಾಶ್ರೀಗೆ ತಾವು ಹೇಳಿದ್ದಾಗಿ ತಿಳಿಸಿದರು.

ಸಚಿವೆ ಉಮಾಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧಗಂಗಾ ಕಿರಿಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ತುಮ​ಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಅಧ್ಯಕ್ಷತೆ ವಹಿಸಿ​ದ್ದರು. ಕಾನೂನು ಸಚಿವ ಟಿ.ಬಿ. ಜಯಚಂದ್ರ, ವಿ.ಎಸ್‌. ಉಗ್ರಪ್ಪ, ಎಂ.ಡಿ. ಲಕ್ಷ್ಮೀನಾರಾಯಣ ಇದ್ದರು.