ಎಐಸಿಸಿ ನೀಡಿರುವ ಸೂಚನೆಯಂತೆ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಏಕೈಕ ಗುರಿ. 2018ರ ಚುನಾವಣೆ ನೇತೃತ್ವವನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್‌ ಹಾಗೂ ಶಾಸಕಾಂಗ ಪಕ್ಷ ತೀರ್ಮಾನಿಸುತ್ತದೆ: ಪರಮೇಶ್ವರ್

ತುಮಕೂರು: ಕೆಪಿಸಿಸಿ ಅಧ್ಯಕ್ಷರಾಗಿ ಪುನರಾಯ್ಕೆಯಾಗಿ ರುವ ಡಾ.ಜಿ.ಪರಮೇಶ್ವರ್‌ ಅವರು ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಯಾಗಿ ಆಶೀರ್ವಾದ ಪಡೆದರು. ಪರಮೇಶ್ವರ್‌ ಅವರೊಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್‌ ಗುಂಡೂ ರಾವ್‌, ಎಸ್‌.ಆರ್‌. ಪಾಟೀಲ್‌, ಸಂಸದ ಎಸ್‌. ಪಿ. ಮುದ್ದಹನುಮೇಗೌಡ, ಶಾಸಕ ಡಾ. ರಫೀಕ್‌ ಅಹಮದ್‌ ಇದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ಎಐಸಿಸಿ ನೀಡಿರುವ ಸೂಚನೆಯಂತೆ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಏಕೈಕ ಗುರಿ. 2018ರ ಚುನಾವಣೆ ನೇತೃತ್ವವನ್ನು ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್‌ ಹಾಗೂ ಶಾಸಕಾಂಗ ಪಕ್ಷ ತೀರ್ಮಾನಿಸುತ್ತದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಹೈಕಮಾಂಡ್‌ ತೀರ್ಮಾನಿಸಿದರೆ ಅಲ್ಲಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.