ಸರಕಾರಿ ಶಾಲೆಗಳು ಮಧ್ಯಾಹ್ನದೂಟ ಯೋಜನೆಯ ಅಡ್ಡೆಗಳಂತಾಗಿಬಿಟ್ಟಿವೆ. ಕಟ್ಟುನಿಟ್ಟು ಪರೀಕ್ಷೆ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ಅಗತ್ಯವಾಗಿದೆ ಎಂದು ಪ್ರಕಾಶ್ ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಜುಲೈ 23): ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ನಿರೀಕ್ಷೆಯಿಂದ ಕೇಂದ್ರ ಸರಕಾರವು ಸರಕಾರಿ ಶಾಲಾ ಶಿಕ್ಷಣದಲ್ಲಿ ಸ್ವಲ್ಪ ಬದಲಾವಣೆ ತರಲು ಯೋಜಿಸಿದೆ. ವಿದ್ಯಾರ್ಥಿಗಳು 5 ಮತ್ತು 8ನೇ ತರಗತಿಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಇನ್ಮುಂದೆ ಕಡ್ಡಾಯ. ಪಾಸ್ ಆಗದಿದ್ದರೆ ಮುಂದಿನ ತರಗತಿಗೆ ಹೋಗಲು ಸಾಧ್ಯವಾಗದೇಹೋಗಬಹುದು.

ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ. ಈ ಹೊಸ ನಿಯಮಕ್ಕೆ 25 ರಾಜ್ಯಗಳು ಒಪ್ಪಿಗೆ ಕೊಟ್ಟಿವೆ. ಕೇಂದ್ರ ಸರಕಾರವು ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಮಸೂದೆಯೊಂದನ್ನು ಸಂಸತ್'ನಲ್ಲಿ ಮಂಡಿಸಲಿದೆ. ಬಹುತೇಕ ರಾಜ್ಯಗಳ ಒಪ್ಪಿಗೆ ಇರುವುದರಿಂದ ಮಸೂದೆ ಪಾಸ್ ಆಗುವ ಸಾಧ್ಯತೆ ಇದೆ.

ಫೇಲ್ ಆದ ವಿದ್ಯಾರ್ಥಿಯನ್ನು ಮುಂದಿನ ತರಗತಿಗೆ ಕಳುಹಿಸಬೇಕೋ ಬೇಡವೋ ಎಂಬ ಬಗ್ಗೆ ರಾಜ್ಯ ಸರಕಾರಕ್ಕೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿದೆ. 10 ಮತ್ತು 12ನೇ ತರಗತಿಯಲ್ಲಿ ಸಪ್ಲಿಮೆಂಟರಿ ಪರೀಕ್ಷೆಗಳಿರುವಂತೆ 5 ಮತ್ತು 8ನೇ ತರಗತಿಗೂ ಫೇಲ್ಡ್ ವಿದ್ಯಾರ್ಥಿಗಳಿಗೆ ಸೆಕೆಂಡ್ ಚಾನ್ಸ್ ಇರಲಿದೆ. ಮುಖ್ಯ ಪರೀಕ್ಷೆಯಾದ 1 ತಿಂಗಳ ಬಳಿಕ, ಅಂದರೆ ಮೇ ತಿಂಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆ ಇರಲಿದೆ. ಒಟ್ಟಾರೆ, ವಿದ್ಯಾರ್ಥಿಯೊಬ್ಬ 9ನೇ ತರಗತಿಗೆ ಸೇರ್ಪಡೆಯಾಗಬೇಕಾದರೆ 5 ಮತ್ತು 8ನೇ ತರಗತಿ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸ್ ಮಾಡಬೇಕು.

ಈಗಿರುವ ವ್ಯವಸ್ಥೆಯಲ್ಲಿ ಸರಕಾರೀ ಶಾಲೆಗಳಲ್ಲಿ 1ರಿಂದ 8ನೇ ತರಗತಿಯವರೆಗೆ ಯಾವುದೇ ವಿದ್ಯಾರ್ಥಿಯನ್ನೂ ಫೇಲ್ ಮಾಡುವಂತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸರಕಾರಿ ಶಾಲೆಗಳು ಮಧ್ಯಾಹ್ನದೂಟ ಯೋಜನೆಯ ಅಡ್ಡೆಗಳಂತಾಗಿಬಿಟ್ಟಿವೆ. ಮಕ್ಕಳು ಊಟ ಮಾಡಲೆಂದೇ ಶಾಲೆಗೆ ಬರುವಂಥ ಸ್ಥಿತಿ ಇದೆ. ಹೀಗಾಗಿ, ಕಟ್ಟುನಿಟ್ಟು ಪರೀಕ್ಷೆ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿ ಅವರ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ಅಗತ್ಯವಾಗಿದೆ ಎಂದು ಪ್ರಕಾಶ್ ಜಾವಡೇಕರ್ ಅಭಿಪ್ರಾಯಪಟ್ಟಿದ್ದಾರೆ.