Asianet Suvarna News Asianet Suvarna News

ಕೈ - ತೆನೆ ಆಡಳಿತಕ್ಕೆ ಕಮಲ ಬ್ರೇಕ್ ?

ಮೂರು ವರ್ಷದಿಂದ ಅಧಿಕಾರವಿಲ್ಲದೆ ಕುಳಿತಿರುವ ಬಿಜೆಪಿಗೆ ಮತ್ತೊಮ್ಮೆ ಪಾಲಿಕೆ ಚುಕ್ಕಾಣಿ ಹಿಡಿಯುವ ಪ್ರಯತ್ನಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. ಅಂಕಿ-ಸಂಖ್ಯೆ ಹೊಂದಿಸುವಲ್ಲಿ ತುಸುವೇ ಯಾಮಾರಿದರೂ ಮೇಯರ್ ಹುದ್ದೆ ಬಿಜೆಪಿ ಪಾಲಾಗಲಿದೆ.

Will BJP Benefit From Tussle Between Congress And JDS
Author
Bengaluru, First Published Aug 31, 2018, 9:39 AM IST

ಬೆಂಗಳೂರು : ಕಳೆದ ಮೂರು ವರ್ಷದಿಂದ ಬಿಬಿಎಂಪಿ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಈ ಬಾರಿ ಅಂಕಿ-ಸಂಖ್ಯೆ ಹೊಂದಿಸುವಲ್ಲಿ ತುಸುವೇ ಯಾಮಾರಿದರೂ ಮೇಯರ್ ಹುದ್ದೆ ಬಿಜೆಪಿ ಪಾಲಾ ಗುವ ಸಾಧ್ಯತೆಯಿದ್ದು, ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಬೀಳುವ ಮೊದಲ ಪ್ರಬಲ ಹೊಡೆತವಾಗುವ ಸಾಧ್ಯತೆಯಿದೆ.

ಬಿಬಿಎಂಪಿಯಿಂದ ವಿಧಾನಸಭೆಗೆ ಬಿಜೆಪಿ ಮುನ್ನುಗ್ಗುವ ಸಾಧ್ಯತೆ ತೆರೆದುಕೊಳ್ಳಲು ಕಾರಣವಾಗಿರುವುದು ಮ್ಯಾಜಿಕ್ ನಂಬರ್ ಲೆಕ್ಕಾಚಾರ. ಮೇಯರ್ ಆಯ್ಕೆಗೆ ಅರ್ಹ ಮತದಾರರ ಸಂಖ್ಯೆ ಕಳೆದ ಬಾರಿಗಿಂತ ಈ ಬಾರಿ ಐದಾರು ಅಂಕಿ ಇಳಿಕೆಯಾಗುವ ಸಾಧ್ಯತೆ ಇದ್ದು, ಇದು ಮೂರು ವರ್ಷದಿಂದ ಅಧಿಕಾರವಿಲ್ಲದೆ ಕುಳಿತಿರುವ ಬಿಜೆಪಿಗೆ ಮತ್ತೊಮ್ಮೆ ಪಾಲಿಕೆ ಚುಕ್ಕಾಣಿ ಹಿಡಿಯುವ ಪ್ರಯತ್ನಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ.

ಮೇಯರ್ ಆಯ್ಕೆಗೆ ಕಳೆದ ಬಾರಿ ಇದ್ದ 266 ಮತದಾರರ ಸಂಖ್ಯೆ ವಿವಿಧ ಕಾರಣಗಳಿಂದ ಈ ಬಾರಿ 259ಕ್ಕೆ ಇಳಿಕೆಯಾಗಲಿದೆ. ಇದರಿಂದ ಮೇಯರ್ ಹುದ್ದೆಗೇರಲು ಅಗತ್ಯ ಮ್ಯಾಜಿಕ್ ಮತಗಳ ಸಂಖ್ಯೆ 130 ರಷ್ಟು ಬೇಕಾಗುತ್ತದೆ. ಇದು ಬಿಜೆಪಿ ಪಾಲಿಕೆಯಲ್ಲಿ ಹೊಂದಿರುವ ಮತ ಬಲಕ್ಕಿಂತ ಏಳೆಂಟು ಮತಗಳಷ್ಟೇ ಕಡಿಮೆಯಾಗಲಿದ್ದು, ಗೆಲುವಿಗೆ ಕೊರತೆಯಾಗುವ ಮತಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಲು ಅವಕಾಶವಿದೆ. 

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ೮ ಪಕ್ಷೇತರ ಸದಸ್ಯರನ್ನೂ ಒಳಗೊಂಡಂತೆ ಒಟ್ಟು ೧೩೭ ಮತಗಳ ಸಂಖ್ಯಾಬಲ ಹೊಂದಿರುವುದಾಗಿ  ಹೇಳುತ್ತಿದೆ. ಅಂದರೆ ಗೆಲುವಿಗೆ ಬೇಕಿರುವ 130 ಮತಗಳಿಗಿಂತ ಏಳು ಮತಗಳನ್ನು ಹೆಚ್ಚಾಗಿ ಹೊಂದಿದ್ದು, ಈ ಬಾರಿಯೂ ಪಾಲಿಕೆ ಚುಕ್ಕಾಣಿ ನಮ್ಮದೇ ಎಂದು ತಾಳೆ ಹಾಕಿಕೊಂಡಿದೆ. ಆದರೆ, ಮೈತ್ರಿಕೂಟದ ಈ ತಾಳೆಯನ್ನು ತಲೆ ಕೆಳಗು ಮಾಡಲು ಈ ಬಾರಿ ಬಿಜೆಪಿಗೆ ಅವಕಾಶ ಸಿಗ ಲಿದ್ದು, ಇದರ ಲಾಭ ಪಡೆಯಲು ಹವಣಿಸುತ್ತಿದೆ.

ಮೈತ್ರಿ ಕೂಟದ ಕನಿಷ್ಠ ೮ ಮತಗಳನ್ನು ಸೆಳೆದರೂ ಬಿಜೆಪಿಗೆ ಗೆಲುವು ಸಲೀಸಾಗಲಿದೆ. ಇದಕ್ಕಾಗಿ ಬಿಜೆಪಿ ಯವರ ಲೆಕ್ಕಾಚಾರ  ನಡೆಸ ಲಾರಂಭಿಸಿದ್ದು, ತಮ್ಮ ಬಳಿ 122 ಮತಗಳಿದ್ದು, ಮ್ಯಾಜಿಕ್ ಸಂಖ್ಯೆ 130 ಮುಟ್ಟಲು ಪಕ್ಷೇತರರು ಸೇರಿದಂತೆ ಮೈತ್ರಿ ಕೂಟದ ಅಸಮಾಧಾ
ನಿತ ಸದಸ್ಯರಿಗೆ ಬಲೆ ಬೀಸುವ ಯೋಚನೆಯಲ್ಲಿದೆ. 

ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರನ ಡೆದು, ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿರುವ ಕೆಲ ಪಕ್ಷೇ ತರ ಸದಸ್ಯರೂ ಸೇರಿದಂತೆ ಎಂಟು ಜನ ಪಕ್ಷೇತರರಿಗೆ ಗಾಳ ಹಾಕುವ ಸಾಧ್ಯತೆ ಇದೆ. ಇವರಲ್ಲಿ ಕೆಲ ಸದಸ್ಯರು ಪಕ್ಕಾ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರ ಬೆಂಬಲಕ್ಕಿರುವುದರಿಂದ ಅಗತ್ಯದಷ್ಟು ಸಂಖ್ಯೆಯ ಸದಸ್ಯ ರನ್ನು ಸೆಳೆಯಲು ಸಾಧ್ಯವಾಗದೆ ಹೋಗಬಹುದು. 

ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಅಸಮಾಧಾನ ಇರುವ ಸದಸ್ಯರ ಗುಂಪಿಗೂ ಕೈಹಾಕುವ ಸಾಧ್ಯತೆಗಳಿವೆ. ಬಿಜೆಪಿಯ ಈ ಲೆಕ್ಕಾಚಾರಕ್ಕೆ ಪ್ರಯತ್ನದ ಮೂಲಕ ಯಶಸ್ಸು ಸಿಕ್ಕಿದರೆ ಮೂರು ವರ್ಷದಿಂದ ಕೈತಪ್ಪಿದ್ದ ಪಾಲಿಕೆ ಚುಕ್ಕಾಣಿ ಈ ಬಾರಿ ಕೈಗೆಟುಕಲಿದೆ ಎನ್ನುತ್ತವೆ ಪಾಲಿಕೆ ಮೂಲಗಳು.
 
ಕೈ - ತೆನೆ ನಡುವೆ ಹಗ್ಗ ಜಗ್ಗಾಟ

ಮೇಯರ್ ಸ್ಥಾನಕ್ಕಾಗಿ ಈಗಾಗಲೇ ಮೈತ್ರಿ ಕೂಟದ ಕಾಂಗ್ರೆಸ್-ಜೆಡಿಎಸ್ ನಲ್ಲೇ ತೀವ್ರ ಹಗ್ಗಜಗ್ಗಾಟ ಆರಂಭವಾಗಿದ್ದು, ಮೂರು ವರ್ಷಗಳಿಂದ ಕಾಂಗ್ರೆಸ್‌ಗೆ ಮೇಯರ್ ಹುದ್ದೆ ಬಿಟ್ಟುಕೊಟ್ಟಿದ್ದ ಜೆಡಿಎಸ್ ಈ ಬಾರಿ ತಮಗೆ ನೀಡುವಂತೆ ಈಗಾಗಲೇ ನೇರವಾಗಿಯೇ ಆಗ್ರಹಿಸಿದೆ. ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ವಂಚಿತ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಗೋಪಾಲಯ್ಯ ಅವರು ತಮ್ಮ ಪತ್ನಿ ಪಾಲಿಕೆ ಸದಸ್ಯೆ ಹೇಮಲತಾ ಗೋಪಾಲಯ್ಯ ಅವರನ್ನು ಮೇಯರ್ ಸ್ಥಾನದಲ್ಲಿ ಕೂರಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಇದರ ಜತೆಗೆ ಪಾಲಿಕೆ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಹಾಲಿ ಉಪಮೇಯರ್ ಪದ್ಮಾವತಿ ನರಸಿಂಹ ಮೂರ್ತಿ ಸೇರಿದಂತೆ ಇನ್ನೂ ಕೆಲವರು ಆಕಾಂಕ್ಷಿಗಳಾಗಿದ್ದಾರೆ.  

ಇನ್ನು ಕಾಂಗ್ರೆಸ್‌ನಲ್ಲಿ ರಾಜ್ಯ ಸರ್ಕಾರದಲ್ಲಿ ಕೂಡ ಮೈತ್ರಿ ಏರ್ಪಟ್ಟು ಮುಖ್ಯಮಂತ್ರಿ ಹುದ್ದೆಯನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದರಿಂದ ಮೇಯರ್ ಹುದ್ದೆಯನ್ನು ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಅಲ್ಲದೆ, ಕಾಂಗ್ರೆಸ್‌ನಲ್ಲಿ ಈ ಬಾರಿ ಸಚಿವ ಸ್ಥಾನ ವಂಚಿತರಾಗಿರುವ ಪ್ರಭಾವಿ ನಾಯಕ ರಾಮಲಿಂಗಾರೆಡ್ಡಿ ಅವರು, ಈ ಬಾರಿ ತಮ್ಮ ಬೆಂಬಲಿಗರಾದ ಜಯನಗರ ವಾರ್ಡ್ ಸದಸ್ಯೆ ಗಂಗಾಂಭಿಕೆ ಅವರನ್ನು ಮೇಯರ್ ಹುದ್ದೆಗೆ ಆಯ್ಕೆ ನಡೆಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಗಂಗಾಬಿಕೆ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಮಾಜಿ ಸಚಿವ ಲಿಂಗಾಯತ ಸಮುದಾಯದ ಪ್ರಭಾವಿ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕೂಡ ಪಕ್ಷದ ನಾಯಕತ್ವಕ್ಕೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಮತ್ತೊಂದೆಡೆ ಒಕ್ಕಲಿಗರ ಸಮುದಾಯದ ಶಾಂತಿನಗರ ವಾರ್ಡ್‌ನ ಸದಸ್ಯೆ ಸೌಮ್ಯ ಶಿವಕುಮಾರ್ ತೀವ್ರ ಪ್ರಯತ್ನ ನಡೆಸಿದ್ದಾರೆ. ಇವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇಗೌಡರ ಆಶೀರ್ವಾದ ಕೂಡ ಇದೆ. ಒಂದು ವೇಳೆ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪದಿದ್ದರೆ, ತಮ್ಮ ಪಕ್ಷ ಬೆಂಬಲಿತ ಬೆಂಬಲಿತ ಅಭ್ಯರ್ಥಿ ಸೌಮ್ಯ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಜೆಡಿಎಸ್ ಪಟ್ಟು ಹಿಡಿಯಲು ನಿರ್ಧರಿಸಿದೆ. 

ಲಿಂಗರಾಜು ಕೋರಾ

Follow Us:
Download App:
  • android
  • ios