Viral Video: ಆನೆ ಅಟ್ಟಿಸಿ ಬಂದಿದ್ದಕ್ಕೆ 8 ಕಿ.ಮೀ. ರಿವರ್ಸ್ ಬಸ್ ಓಡಿಸಿದ ಚಾಲಕ!
- ಆನೆ ಅಟ್ಟಿಸಿ ಬಂದಿದ್ದಕ್ಕೆ 8 ಕಿ.ಮೀ. ರಿವರ್ಸ್ ಬಸ್ ಓಡಿಸಿದ ಚಾಲಕ!
- ಕೇರಳದ ಚಾಲಕುಡಿಯಲ್ಲಿ ನಡೆದ ಘಟನೆ
ತ್ರಿಶ್ಯೂರು (ನ.17): ಪ್ರಯಾಣಿಕರಿಂದ ತುಂಬಿದ್ದ ಬಸ್ಸನ್ನು ಕಾಡಾನೊಯೊಂದು ಅಡ್ಡಗಟ್ಟಿಓಡಿಸಿಕೊಂಡು ಬಂದ ಪರಿಣಾಮ, ಬಸ್ ಚಾಲಕ ಬಸ್ಸನ್ನು ಹಿಮ್ಮುಖವಾಗಿ 8 ಕಿ.ಮೀ ಓಡಿಸಿಕೊಂಡು ಬಂದು ಪ್ರಯಾಣಿಕರ ಜೀವ ಕಾಪಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ತೀವ್ರವಾದ ತಿರುವುಗಳ ದಾರಿಯಲ್ಲೂ ಅತ್ಯಂತ ಸಮಾಧಾನವಾಗಿ ಬಸ್ ಅನ್ನು ರಿವರ್ಸ್‌ನಲ್ಲಿ ಓಡಿಸಿದ ಚಾಲಕ, ಬಸ್‌ನಲ್ಲಿದ್ದ 40 ಪ್ರಯಾಣಿಕರ ಪ್ರಾಣವನ್ನು ಕಾಪಾಡಿ ಮೆಚ್ಚುಗೆ ಗಳಿಸಿದ್ದಾನೆ. ಈ ಘಟನೆ ವಾಲ್‌ಪರೈ ಮಾರ್ಗದ ಚಾಲಕುಡಿಯಲ್ಲಿ ಮಂಗಳವಾರ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಸ್‌ನಲ್ಲಿರುವ ಪ್ರಯಾಣಿಕನೊಬ್ಬ ಈ ಘಟನೆಯ ವಿಡಿಯೋ ಮಾಡಿದ್ದು, ಅದರಲ್ಲಿ ಕಾಡಾನೆಯು ವಿರುದ್ಧ ದಿಕ್ಕಿನಿಂದ ಖಾಸಗಿ ಬಸ್ ಅನ್ನು ಅಟ್ಟಿಸಿಕೊಂಡು ಬರುತ್ತಿರುತ್ತಿರುವುದನ್ನು ನೋಡಬಹುದಾಗಿದೆ. ಇದನ್ನು ಕಂಡ ಪ್ರಯಾಣಿಕರು ಬಸ್ ಚಾಲಕನಿಗೆ ಬಸ್ ತಿರುಗಿಸಲು ಹೇಳಿದರೂ ಕಾಡಿನ ಕಿರಿದಾದ ಹಾದಿಯಲ್ಲಿ ಅದಕ್ಕೆ ಅವಕಾಶವಿರಲಿಲ್ಲ. ಆಗ ಚಾಲಕ ಅಂಬುಜಾಕ್ಷನ್ ಬಸ್ ವೇಗಕ್ಕೆ ಹೊಂದಿಕೊಳ್ಳಲಾಗದೇ ಕಾಡಾನೆ ಮರಳುವವರೆಗೂ ಅಂಬಾಲಾಪರಾದಿಂದ ಆನಕ್ಕಯಂವರೆಗೆ ರಿವರ್ಸ್‌ಗೇರ್‌ನಲ್ಲೇ ಬಂದಿದ್ದಾನೆ. ಈ ಘಟನೆಗೆ ಕಾರಣವಾದ ಆನೆಯ ಹೆಸರು ‘ಕಬಾಲಿ’ (ರಜನೀಕಾಂತ್ ಚಿತ್ರದ ಹೆಸರು) ಎಂದಾಗಿದ್ದು, ಇದು ಆಗಾಗ ಇದೇ ಮಾರ್ಗದಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸೊಂಡಿಲಿನಿಂದ ಪತ್ರಕರ್ತನ ಕಿವಿಹಿಂಡಿ ಮೂಗೆಳೆದ ಆನೆಮರಿ