ಬೆಂಗಳೂರು[ಏ.29]: ತನ್ನ ಪತಿ ಬೇರೊಬ್ಬ ಸ್ತ್ರೀ ಜೊತೆ ಹೆಚ್ಚು ಮಾತನಾಡುತ್ತಾನೆ ಎಂಬ ಕಾರಣಕ್ಕೆ ಪತಿಯ ಮೇಲೆ ಪತ್ನಿಯೇ ಆ್ಯಸಿಡ್‌ ಎರಚಿರುವ ಘಟನೆ ತಿಲಕ್‌ನಗರದಲ್ಲಿ ನಡೆದಿದೆ.

ಅದೃಷ್ಟವಶಾತ್‌ ಆ್ಯಸಿಡ್‌ ಮೊಹಮ್ಮದ್‌ ಅತೀಮ್‌ನ ಹಣೆಗೆ ಮಾತ್ರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಸಣ್ಣಪುಟ್ಟಗಾಯಗಳೊಂದಿಗೆ ಪಾರಾಗಿದ್ದಾನೆ. ಆ್ಯಸಿಡ್‌ ಎರಚಿದ ಆರೋಪದ ಹಿನ್ನೆಲೆಯಲ್ಲಿ ಅಕ್ಸಾ ಪರ್ವೀನ್ (35) ತಿಲಕ್‌ನಗರ ಠಾಣೆ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

ಅತೀಮ್‌ ಮತ್ತು ಅಕ್ಸಾ ಪರ್ವೀನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಸ್ಪರ ಪ್ರೀತಿಸಿದ್ದರು. ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದು 2006ರಲ್ಲಿ ವಿವಾಹವಾಗಿದ್ದರು. ಮೊಹಮ್ಮದ್‌ನ ಮೂಲ ಹೆಸರು ಶಾಂತರಾಜು ಆಗಿದ್ದು, ಪರ್ವೀನ್ ಳನ್ನು ವಿವಾಹವಾಗುವ ಸಂದರ್ಭದಲ್ಲಿ ಹೆಸರು ಬದಲಾಯಿಸಿಕೊಂಡಿದ್ದ. ಮೊಹಮ್ಮದ್‌ ಎಂಬ ಹೆಸರಿನಲ್ಲಿ ವಿವಾಹವನ್ನು ಕೂಡ ನೋಂದಾಯಿಸಿಕೊಂಡಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಪ್ರಾರಂಭದಲ್ಲಿ ದಂಪತಿ ಅನೋನ್ಯವಾಗಿಯೇ ಇದ್ದರು. ಶಾಂತರಾಜು ಬೇರೊಬ್ಬ ಯುವತಿ ಜತೆ ಹೆಚ್ಚು ಒಡನಾಟ ಹೊಂದಿದ್ದು, ಮೊಬೈಲ್‌ ಸಂಭಾಷಣೆಯಲ್ಲಿ ತೊಡಗಿರುತ್ತಿದ್ದ. ಈ ಬಗ್ಗೆ ಪರ್ವೀನ್ ಪತಿಯನ್ನು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಹಲವು ಬಾರಿ ದಂಪತಿ ನಡುವೆ ಜಗಳ ನಡೆದು, ವಿಕೋಪಕ್ಕೆ ಹೋಗಿತ್ತು.

ಇಬ್ಬರು ಅನೋನ್ಯವಾಗಿರಲು ಸಾಧ್ಯವಿಲ್ಲ ಎಂದಾಗ ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ದಂಪತಿ ಕೆಲ ವರ್ಷ ಒಟ್ಟಿಗೆ ಇರಲು ನಿರ್ಧರಿಸಿದ್ದರು. ಈ ವೇಳೆಯೂ ಶಾಂತರಾಜು ಬೇರೊಬ್ಬ ಯುವತಿ ಒಡನಾಟ ಇಟ್ಟುಕೊಂಡಿದ್ದನ್ನು ಬಿಟ್ಟಿರಲಿಲ್ಲ. ಇದೇ ವಿಚಾರಕ್ಕೆ ಏ.24 ರಂದು ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ಏ.24 ರಂದು ರಾತ್ರಿ ಪತಿ ಮೇಲೆ ಆ್ಯಸಿಡ್‌ ಎರಚಿದ್ದಾರೆ. ಅದೃಷ್ಟವಶಾತ್‌ ಆ್ಯಸಿಡ್‌ ಶಾಂತರಾಜುವಿನ ಹಣೆಗೆ ಮಾತ್ರ ತಗುಲಿ ಸಣ್ಣಪುಟ್ಟಗಾಯಗಳಿಂದ ಪರಾಗಿದ್ದಾನೆ. ಪತಿ ಕೊಟ್ಟದೂರಿನ ಮೇರೆಗೆ ಪತ್ನಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.