ನಾಶಿಕ್(ಮಾ.03): ಈಗ ಎಲ್ಲಿ ನೋಡಿದರೂ ಯುದ್ಧದ್ದೇ ಮಾತು. ಪಾಕಿಸ್ತಾನಕ್ಕೆ ನುಗ್ಗಿ ಸರ್ವನಾಶ ಮಾಡುವ ಗಂಡೆದೆಯನ್ನು ಎಲ್ಲರೂ ಪ್ರದರ್ಶಿಸುತ್ತಿದ್ದಾರೆ. ಆದರೆ ಬಹುತೇಕರ ದೇಶಭಕ್ತಿ ಸಾಮಾಜಿಕ ಜಾಲತಾಣಗಳಿಗಷ್ಟೇ ಸಿಮೀತವಾಗಿದೆ.

ಆದರೆ ಪಾಕ್ ನೊಂದಿಗೆ ನೈಜ ಯುದ್ಧದಲ್ಲಿ ತೊಡಗಿರುವ ಭಾರತೀಯ ಯೋಧರು, ಕೆಚ್ಚೆದೆಯಿಂದ ಯುದ್ಧಭೂಮಿಯಲ್ಲಿ ಪಾಕಿಸ್ತಾನಕ್ಕೆ ಜವಾಬು ನೀಡುತ್ತಿದ್ದಾರೆ.

ಆದರೆ ದೇಶಸೇವೆಯಲ್ಲಿ ತಮ್ಮ ಪ್ರಾಣವನ್ನೂ ಅರ್ಪಿಸುವ ಧೀರ ಯೋಧರ ಕುಟುಂಬ ಮಾತ್ರ ಅನಾಥವಾಗುವುದು ದುರ್ದೈವದ ಸಂಗತಿ. ಆದರೆ ಯುದ್ದೋನ್ಮಾದದಲ್ಲಿರುವ ಎರಡೂ ಕಡೆಯ ಸೋಷಿಯಲ್ ಮಿಡಿಯಾ ಶೂರರಿಗೆ ಮಾತ್ರ ಯುದ್ಧದ ಭೀಕರತೆ ಮಾತ್ರ ಇನ್ನೂ ಅರ್ಥವಾಗಿಲ್ಲ. ಯುದ್ಧ ಅಂತಿಮ ಆಯ್ಕೆ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ.

ಅದರಂತೆ ಬುದ್ಗಾಮ್ ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ವೀರ ಮರಣವನ್ನಪ್ಪಿದ ವಾಯುಸೇನೆಯ ಸ್ಕ್ವಾರ್ಡನ್  ಲೀಡರ್ ನಿನಾದ್ ಮಂದಾವ್ಗಾನೆ ಪತ್ನಿ ಈ ಸೋಷಿಯಲ್ ಮಿಡಿಯಾ ವೀರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯುದ್ಧ ಬೇಕು ಎನ್ನುತ್ತಿರುವವರು ಸ್ವತಃ ಯುದ್ಧಭುಮಿಗೆ ಹೋಗಲಿ, ಬಂದೂಕು ಬಾಂಬ್ ಗಳನ್ನು ಎದುರಿಸಲಿ ಎಂದು ವಿಜೇತಾ ಮಂದಾವ್ಗಾನೆ ಕಿಡಿಕಾರಿದ್ದಾರೆ.

ನಿನಾದ್ ಮಂದಾವ್ಗಾನೆಯ ಅಂತ್ಯ ಸಂಸ್ಕಾರ ನಾಶಿಕ್ ನಲ್ಲಿ ನೆರವೇರಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರನಿಗಾಗಿ ನೆರೆದ ಸಾವಿರಾರು ಜನರು ಕಂಬನಿ ಮಿಡಿದರು.