ಮುಂಬೈ[ಫೆ.25]: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಯೋಧರ ಕುಟುಂಬ ಸದಸ್ಯರ ನೋವನ್ನು ನಾವು ಕೇವಲ ಅರ್ಥೆಸಿಕೊಳ್ಳಬಹುದು. ಆದರೆ ತಮ್ಮ ಮಗ, ಗಂಡ ಅಥವಾ ಸಹೋದರನ ತ್ಯಾಗದ ಬಳಿಕ ಕುಟುಂಬದ ಜವಾಬ್ದಾರಿ ಮಾತ್ರ ಕುಟುಂಬ ಸದಸ್ಯರೇ ನಿರ್ವಹಿಸಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಹುತಾತ್ಮ ಯೋಧನ ಹೆಂಡತಿ ತನ್ನ ಗಂಡನನ್ನು ಕಳೆದುಕೊಂಡ ದುಃಖದಲ್ಲಿರುವಾಗಲೇ, ಕುಟುಂಬದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಾಗುತ್ತದೆ. ಹೀಗಿರುವಾಗ ಹುತಾತ್ಮ ಯೋಧನ ಪತ್ನಿ ಗೌರಿ ಪ್ರಸಾದ್ ಮಹಾದಿಕ್ ಕಥೆ ನವು ಓದಲೇಬೇಕಾಗುತ್ತದೆ.

ಗೌರಿ ಪ್ರಸಾದ್, ಮೇಜರ್ ಪ್ರಸಾದ್ ಮಹಾದಿಕ್ ರವರ ಪತ್ನಿ. ಮೇಜರ್ ಪ್ರಸಾದ್ ಮಹಾದಿಕ್ 2017ರಲ್ಲಿ ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದಲ್ಲಿದ್ದ ಇಂಡೋ-ಚೈನಾ ಬಾರ್ಡರ್ ಶೆಲ್ಟರ್ ನಲ್ಲಿ ಬೆಂಕಿ ತಗುಲಿ ಹುತಾತ್ಮರಾಗಿದ್ದರು. ಮೇಜರ್ ಪ್ರಸಾದ್, ಬಿಹಾರ ರೆಜಿಮೆಂಟ್ ನ 7ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಉನ್ನತ ಅಧಿಕಾರಿಗಳಲ್ಲಿ ಒಬ್ಬರು. 

ತನ್ನ ಪ್ರೀತಿಯ ಗಂಡನ ಸಾವಿನ ಸುದ್ದಿ ಕೇಳಿದ ಗೌರಿ ಸೋಲೊಪ್ಪಲಿಲ್ಲ. ಬದಲಾಗಿ ಅದೇ ಕ್ಷಣ ತಾನೂ ಸೇನೆಗೆ ಭರ್ತಿಯಾಗುವ ನಿರ್ಧಾರ ತೆಗೆದುಕೊಂಡಿದ್ದರು. ವೃತ್ತಿಯಲ್ಲಿ ವಕೀಲೆಯಾಗಿದ್ದ ಗೌರಿ ಪ್ರಸಾದ್ ತನ್ನ ಗಂಡನ ನಿಧನದ ಬಳಿಕ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಭಾರತೀಯ ಸೇನೆಯ ಸಶಸ್ತ್ರ ಪಡೆಗೆ ಸೇರುವ ತಯಾರಿ ಆರಂಭಿಸಿದರು. ಅವರು ಎರಡನೇ ಪ್ರಯತ್ನದಲ್ಲಿ ವಿಧವೆ ವಿಭಾಗದಡಿಯಲ್ಲಿ Services Selection Board (SSB) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ತನ್ನ ವಿಭಾಗದಲ್ಲಿದ್ದ 16 ಮಂದಿ ಅಭ್ಯರ್ಥಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.

ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಗೌರಿ ಪ್ರಸಾದ್ 2019ರ ಏಪ್ರಿಲ್ ನಿಂದ ಭಾರತೀಯ ಸೇನೆ[ಚೆನ್ನೈ]ಯಲ್ಲಿ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಗೆ ಸೇರಲಿದ್ದಾರೆ. ಈ ಮೂಲಕ ಅವರ 49 ವಾರಗಳ ತರಬೇತಿ ಆರಂಭಗೊಳ್ಳಲಿದೆ. ಇದಾದ ಬಳಿಕ ಗೌರಿಯವರನ್ನು ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಸೇರಿಸಲಾಗುತ್ತದೆ.

ತನ್ನ ವೃತ್ತಿಯನ್ನು ತೊರೆದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ ಗೌರಿ ಪ್ರಸಾದ್ 'ನಾನು ನನ್ನ ಗಂಡನ ನಿಧನದ ಬಳಿಕ ಮೂಲೆಯಲ್ಲಿ ಕುಳಿತು ಅಳುವುದು ನನಗಿಷ್ಟವಿಲ್ಲ. ಬದಲಾಗಿ ಸೇನೆಗೆ ಸೇರುವ ಮೂಲಕ ಹುತಾತ್ಮರಾದ ತನ್ನ ಗಂಡನಿಗೆ ಹೆಮ್ಮೆಯಾಗುವಂತೆ ಬಾಳುತ್ತೇನೆ. ಅವರು ನಾನು ಯಾವತ್ತೂ ಖುಷಿಯಾಗಿ, ನಗು ನಗುತ್ತಾ ಇರಬೇಕೆಂದು ಬಯಸಿದ್ದರು. ನಾನೀಗ ಸೇನೆಗೆ ಸೇರುತ್ತೇನೆ. ಅವರ ಸಮವಸ್ತ್ರ, ಅವರಿಗೆ ಸಿಕ್ಕ ಸ್ಟಾರ್ಸ್ ಧರಿಸುತ್ತೇನೆ. ಇನ್ಮುಂದೆ ಅದು ಅವರದು ಅಥವಾ ನನ್ನ ಸಮವಸ್ತ್ರ ಎಂದು ಹೆಳಲು ಸಾಧ್ಯವಿಲ್ಲ. ಅದು ನಮ್ಮ ಸಮವಸ್ತ್ರವಾಗಲಿದೆ' ಎಂದಿದ್ದಾರೆ.

ಗೌರಿಯವರು 2015ರಲ್ಲಿ ಮೇಜರ್ ಪ್ರಸಾದ್ ಮಹಾದಿಕ್ ರೊಂದಿಗೆ ಮದುವೆಯಾಗಿದ್ದರು. ಪತಿಯ ನಿಧನದ ಬಳಿಕವೂ ಗೌರಿ ಮುಂಬೈನ ವಿರಾರ್ ನಲ್ಲಿರುವ ತನ್ನ ಗಂಡನ ಮನೆಯಲ್ಲಿ, ಅತ್ತೆ ಮಾವನೊಂದಿಗೆ ವಾಸಿಸುತ್ತಿದ್ದಾರೆ.