ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅನಂತರವೂ ಬಾಂಬ್‌ ದಾಳಿ ನಡೆಯಲಿವೆ ಎಂಬ ಸೂಚನೆ ಇದ್ದಿದ್ದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಇದರ ಭಾಗವಾಗಿ ಜನರನ್ನು ತಪಾಸಣೆಗೆ ಒಳಪಡಿಸುವಾಗ ಉದ್ಭವಿಸುವ ತೊಡಕು ನಿವಾರಣೆಗೆ ಮತ್ತು ಭಯೋತ್ಪಾದಕರು ನಿಕಾಬ್‌/ ಬುರ್ಖಾ ತೊಟ್ಟು ದಾಳಿಗೆ ಮುಂದಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಏ.29 ರಿಂದ ಬುರ್ಖಾ ನಿಷೇಧಿಸಲಾಗಿದೆ.

ನೆರೆಯ ದ್ವೀಪರಾಷ್ಟ್ರದಲ್ಲಿ ನಿಕಾಬ್‌ (ಪೂರ್ತಿ ಮುಖ ಮುಚ್ಚುವ ಬಟ್ಟೆ) ನಿಷೇಧಗೊಳಿಸಿದ ಬೆನ್ನಲ್ಲೇ ಭಾರತದಲ್ಲೂ ಬುರ್ಖಾ ನಿಷೇಧಿಸಬೇಕೆಂಬ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ‘ಮುಖ ಮುಚ್ಚುವ ಬಟ್ಟೆ’ ನಿಷೇಧಗೊಳಿಸಿರುವುದು ಶ್ರೀಲಂಕಾ ಮಾತ್ರವಲ್ಲ. ಫ್ರಾನ್ಸ್‌, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಲ್ಲಿ ಇದಕ್ಕೆ ನಿಷೇಧವಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಬುರ್ಖಾ ನಿಷೇಧಕ್ಕೆ ಏನು ಕಾರಣ?

ಭಯೋತ್ಪಾದಕರು ಬುರ್ಖಾವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬುರ್ಖಾಧಾರಿಗಳಾಗಿ ಬಂದು ಆತ್ಮಹತ್ಯಾ ಬಾಂಬ್‌ ದಾಳಿ ಮಾಡುತ್ತಿದ್ದಾರೆ. ಬುರ್ಖಾ ಭದ್ರತೆಗೆ ತಡೆಯೊಡ್ಡುತ್ತಿದೆ. ಕಾಶ್ಮೀರದಂತಹ ಗಡಿ ಪ್ರದೇಶಗಳಲ್ಲೂ ಉಗ್ರರು ಬುರ್ಖಾ ಧರಿಸಿ, ಮುಖ ಮರೆಮಾಚಿಕೊಂಡು ಬಾಂಬ್‌ ಸ್ಫೋಟಿಸಲು, ಸೈನಿಕರನ್ನು ಯಾಮಾರಿಸಲು ಯೋಜನೆ ರೂಪಿಸಿರುವ ಉದಾಹರಣೆಗಳು ಸಾಕಷ್ಟಿವೆ.

ಇದರ ನಿಷೇಧದಿಂದ ಸಂಪೂರ್ಣ ಭಯೋತ್ಪಾದನೆ ನಿಯಂತ್ರಣ ಸಾಧ್ಯವಿಲ್ಲದಿದ್ದರೂ, ಸ್ವಲ್ಪಮಟ್ಟಿಗೆ ಬುರ್ಖಾ ಬಳಸಿಕೊಂಡು ಉಗ್ರರು ಅನುಕೂಲ ಪಡೆಯುವುದನ್ನು ನಿಲ್ಲಿಸಬಹುದು ಎಂಬುದು ಬುರ್ಖಾ ನಿಷೇಧದ ಪರ ಇರುವವರ ವಾದ.

ಆದರೆ, ಬುರ್ಖಾ ನಿಷೇಧದ ಬಗ್ಗೆ ಎಲ್ಲಾ ದೇಶಗಳಲ್ಲೂ ಪರ ವಿರೋಧದ ಅಭಿಪ್ರಾಯಗಳಿವೆ. ಆದಾಗ್ಯೂ ಹಲವು ದೇಶಗಳು ಬುರ್ಖಾ ನಿಷೇಧಿಸಿ ಕಾನೂನನ್ನು ಜಾರಿ ಮಾಡಿವೆ. 2018ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಪ್ರಾನ್ಸ್‌ನಲ್ಲಿ ಬುರ್ಖಾ ನಿಷೇಧಿಸಿದ್ದನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದಿದೆ.

ಹಲವು ರಾಷ್ಟ್ರಗಳಲ್ಲಿ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಬಟ್ಟೆಧರಿಸಿರುವ ಕಾರಣಕ್ಕಾಗಿಯೇ ಸಾಕಷ್ಟುಮಹಿಳೆಯರಿಗೆ ಹಿಂಸೆ ನೀಡಿರುವ ವರದಿಗಳಿವೆ. ಅದೂ ಅಲ್ಲದೆ, ಪ್ರತಿಯೊಬ್ಬರಿಗೂ ತಾವು ಯಾವ ಬಟ್ಟೆತೊಡಬೇಕು ಎಂಬ ಸ್ವಾತಂತ್ರ್ಯವಿದೆ. ಹೀಗಾಗಿ ಈ ರೀತಿ ನಿಷೇಧ ಹೇರುವುದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಅಲ್ಲದೆ ಬುರ್ಖಾ ನಿಷೇಧ ಮಾಡುವುದರಿಂದ ಭಯೋತ್ಪಾದನೆ ನಿಯಂತ್ರಣವಾಗುವುದಿಲ್ಲ.

ಬದಲಿಗೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಂತೆ ಆಗುತ್ತದೆ ಎಂಬುದು ವಿರೋಧಿಗಳ ವಾದ. ಇನ್ನೊಂದೆಡೆ ಭದ್ರತಾ ದೃಷ್ಟಿಯಿಂದ ಮುಖ ಮುಚ್ಚುವ ಬಟ್ಟೆಗಳ ನಿಷೇಧಕ್ಕೆ ಸ್ವಾಗತವಿದೆ. ಆದರೆ ಅದರಲ್ಲಿ ಹಿಂದು, ಮುಸ್ಲಿಂ ಎಂಬ ವಿಭಾಗ ಬೇಡ ಎಂಬ ನಿಲುವು ವ್ಯಕ್ತಪಡಿಸುವವರೂ ಇದ್ದಾರೆ.

ಬುರ್ಖಾದ ಇತಿಹಾಸ

ಬುರ್ಖಾ ಇಸ್ಲಾಂ ಸಮುದಾಯದ ಪ್ರಾತಿನಿಧಿಕ ಬಟ್ಟೆಎಂತಲೇ ಪರಿಗಣಿತವಾಗಿದೆ. ಆದರೆ ಮುಸ್ಲಿಮರ ಪವಿತ್ರ ಗ್ರಂಥ ಖುರಾನ್‌ನಲ್ಲಿ ‘ಬುರ್ಖಾ’ ಬಗ್ಗೆ ಸ್ಪಷ್ಟಉಲ್ಲೇಖ ಇಲ್ಲ. ಅದರಲ್ಲಿ ಮಹಿಳೆ ಅಥವಾ ಪುರುಷರ ಉಡುಗೆಯು ಸಭ್ಯವಾಗಿರಲಿ ಮತ್ತು ಅನಗತ್ಯವಾಗಿ ಅಂಗಾಂಗಗಳ ತೋರ್ಪಡಿಕೆ ಬೇಡ ಎಂದು ಹೇಳಲಾಗಿದೆ ಅಷ್ಟೆ. ಹಾಗಿದ್ದೂ ಬುರ್ಖಾ, ಹಿಜಾಬ್‌ ಅಥವಾ ವೇಲ್‌ಗಳು ಮುಸ್ಲಿಂ ಸಾಂಪ್ರದಾಯಿಕ ಉಡುಗೆಯಾಗಿ ಗುರುತಿಸಿಕೊಂಡಿವೆ.

ಮೂಲತಃ ಬುರ್ಖಾ ಮೊದಲು ಕಾಣಿಸಿಕೊಂಡಿದ್ದು 10ನೇ ಶತಮಾನದ ಪರ್ಷಿಯಾದಲ್ಲಿ. ಅನಂತರದಲ್ಲಿ ಅಷ್ಘಾನಿಸ್ತಾನ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ಪಸರಿಸಿತು. ಅರೇಬಿಯಾದಲ್ಲಿ ಅಲ್ಟಾ್ರ ಕನ್ಸರ್‌ವೇಟಿವ್‌ ವಹಾಬಿ ಸ್ಕೂಲ್‌ ಆಫ್‌ ಇಸ್ಲಾಮ್‌ ‘ನಿಕಾಬ್‌’ ಅನ್ನು ಉತ್ತೇಜಿಸಿದರೆ, ದಕ್ಷಿಣ ಏಷ್ಯಾದಲ್ಲಿ ದಿಯೋಬಂದೀಸ್‌ ಮತ್ತು ಸ್ಥಳೀಯ ಇಸ್ಲಾಂ ಧರ್ಮೀಯರು ಬುರ್ಖಾವನ್ನು ಅಳವಡಿಸಿಕೊಂಡರು.

ಪರಿಣಾಮವಾಗಿ ಜಗತ್ತಿನಲ್ಲಿ ಹಲವಾರು ವಿಧದ ಇಸ್ಲಾಮಿಕ್‌ ಉಡುಗೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಜೊತೆಗೆ ಮಹಿಳೆ ಮತ್ತು ಪುರುಷರಿಬ್ಬರ ದೃಷ್ಟಿಯು ಸಭ್ಯವಾಗಿರಲಿ, ಗುಪ್ತಾಂಗಗಳನ್ನು ಮರೆಮಾಡಿರಲಿ, ಸೌಂದರ್ಯ ಅಂದರೆ ಸ್ವಯಂ ಸಹಜವಾಗಿ ಪ್ರಕಟವಾಗುವ ಅಂಗಾಗಗಳನ್ನು ಹೊರತುಪಡಿಸಿ ಬೇರೆ ಅಂಗಾಂಗಗಳನ್ನು ಪ್ರದರ್ಶಿಸುವುದಲ್ಲ, ಎದೆಯ ಮೇಲೆ ಹೊದಿಕೆಯಿರಲಿ ಎಂಬ ನಿರ್ದೇಶನಗಳು ಖುರಾನ್‌ನಲ್ಲಿವೆ. ಅಲ್ಲಿ ಉಲ್ಲೇಖವಿರುವ ಮುಸುಕು (ವೇಲ್‌) (ಖಿಮಾರ್‌) ಅಥವಾ ಹಿಜಾಬ್‌ ಎಂಬುದು ನಮ್ರತೆಯ ಸೂಚಕವಾಗಿದೆ.

ಬುರ್ಖಾಗೂ ನಿಕಾಬ್‌ಗೂ ಇರುವ ವ್ಯತ್ಯಾಸವೇನು?

ಬುರ್ಖಾ ಮತ್ತು ನಿಕಾಬ್‌ ಬೇರೆ ಬೇರೆ. ಬುರ್ಖಾ ಎಂದರೆ ಮೈಯನ್ನು ಪೂರ್ತಿ ಹೊದ್ದುಕೊಳ್ಳುವ ಬಟ್ಟೆ. ನಿಕಾಬ್‌ ಎಂದರೆ ಕೇವಲ ಕಣ್ಣನ್ನು ಮಾತ್ರ ಬಿಟ್ಟು ಮುಖವನ್ನು ಮರೆ ಮಾಚಿಕೊಳ್ಳುವ ಬಟ್ಟೆ. ಹಿಜಾಬ್‌ ಎಂದರೆ ಮುಖವನ್ನು ಮುಚ್ಚದೆ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ. ಶ್ರೀಲಂಕಾದಲ್ಲಿ ನಿಷೇಧ ಹೇರಿರುವುದು ಕೇವಲ ಕಣ್ಣನ್ನು ಮಾತ್ರ ಬಿಟ್ಟು, ಪೂರ್ತಿ ಮುಖವನ್ನು ಮುಚ್ಚಿಕೊಳ್ಳುವ ಬಟ್ಟೆಗಳಿಗೆ.

ಮುಖಕ್ಕೆ ಬಟ್ಟೆಸುತ್ತಿಕೊಳ್ಳುವುದು ಮುಸ್ಲಿಂ ಸ್ತ್ರೀಯರು ಮಾತ್ರವಲ್ಲ

ಮಹಾರಾಷ್ಟ್ರದ ಶಿವಸೇನೆ (ರಾಜಕೀಯ ಪಕ್ಷ) ಭಾರತದಲ್ಲಿಯೂ ಮುಸ್ಲಿಂ ಮಹಿಳೆಯರು ತೊಡುವ ಬುರ್ಖಾವನ್ನು ನಿಷೇಧಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡಿದೆ. ಆದರೆ ಉತ್ತರ ಭಾರತದಲ್ಲಿ ಅದರಲ್ಲೂ ರಾಜಸ್ಥಾನದಂತಹ ರಾಜ್ಯದಲ್ಲಿ ಅನ್ಯ ಪುರುಷರೆದುರಿಗೆ ಮಹಿಳೆಯರು ಸೆರಗಿನಿಂದ ಮುಖ ಮುಚ್ಚಿಕೊಂಡಿಯೇ ಓಡಾಡುವ ಸಂಪ್ರದಾಯವಿದೆ. ಅದಕ್ಕೆ ಘೂಂಘಟ್‌ ಎಂದು ಕರೆಯಲಾಗುತ್ತದೆ.

ಅಲ್ಲದೆ ಇತ್ತೀಚೆಗೆ ಬೆಂಗಳೂರು, ಚೆನ್ನೈ, ದೆಹಲಿ ಮುಂತಾದ ಮಹಾನಗರಗಳಲ್ಲಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮತ್ತು ಸೌಂದರ್ಯ ಕಾಪಾಡಿಕೊಳ್ಳಲೂ ಕೇವಲ ಕಣ್ಣನ್ನು ಮಾತ್ರ ಬಿಟ್ಟು ಪೂರ್ತಿ ಮುಖಕ್ಕೆ ಬಟ್ಟೆಸುತ್ತಿಕೊಂಡು ಓಡಾಡುವುದನ್ನು ಕಾಣಬಹುದಾಗಿದೆ. ಹಾಗಾಗಿ ಕೇವಲ ಮುಸ್ಲಿಂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ನಿಷೇಧ ಹೇರುವುದು ಸರಿಯಲ್ಲ ಎಂಬ ವಾದ ಕೇಳಿಬರುತ್ತಿದೆ.

ಬರಹಗಾರ ಮತ್ತು ಚಿತ್ರಕತೆಗಾರ ಜಾವೇದ್‌ ಅಖ್ತರ್‌ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಭದ್ರತಾ ದೃಷ್ಟಿಯಿಂದ ಬುರ್ಖಾ ನಿಷೇಧಿಸುವುದಾದರೆ ರಾಜಸ್ಥಾನದಲ್ಲಿ ಧರಿಸುವ ಘೂಂಘಟ್‌ ಅನ್ನೂ ನಿಷೇಧಿಸಲಿ ಎಂದಿದ್ದಾರೆ.

ಯಾವ್ಯಾವ ದೇಶಗಳು ಬುರ್ಖಾ ನಿಷೇಧಿಸಿವೆ?

ಫ್ರಾನ್ಸ್‌

ಸಾರ್ವಜನಿಕವಾಗಿ ಬುರ್ಖಾ ಧರಿಸುವುದನ್ನು ನಿಷೇಧಿಸಿದ ಮೊದಲ ದೇಶ ಫ್ರಾನ್ಸ್‌. 2004ರಲ್ಲಿಯೇ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿತ್ತು. 2014ರಲ್ಲಿ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಯಮ ಉಲ್ಲಂಘನೆಗೆ 150 ಯೂರೋ (ಸುಮಾರು 23000 ರು.) ದಂಡ ಮತ್ತು ಬಲವಂತವಾಗಿ ಮುಖ ಮುಚ್ಚಿಕೊಳ್ಳಲು ಹೇಳಿದಲ್ಲಿ 30,000 ಯೂರೋ (2300000 ರು.) ದಂಡ ವಿಧಿಸಲಾಗುತ್ತದೆ.

ಬೆಲ್ಜಿಯಂ

2011ರಲ್ಲಿ ಇಲ್ಲಿ ಮುಖವನ್ನು ಪೂರ್ತಿಯಾಗಿ ಮರೆಮಾಚುವ ಯಾವುದೇ ಬಟ್ಟೆಯನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆಗೆ 7 ದಿನಗಳ ಜೈಲು, ಒತ್ತಾಯ ಪೂರ್ವಕವಾಗಿ ಧರಿಸಿದರೆ 1370 ಯೂರೋ (ಸುಮಾರು 100000 ರು.) ದಂಡ ವಿಧಿಸಲಾಗುತ್ತದೆ. ಇಲ್ಲಿ ಸರ್ವಾನುಮತದಿಂದ ಈ ಕಾನೂನು ಜಾರಿ ಮಾಡಲಾಗಿದೆ.

ನೆದರ್‌ಲ್ಯಾಂಡ್‌

ಸಾರ್ವಜನಿಕ ಸಾರಿಗೆ, ಶಾಲೆ, ಆಸ್ಪತ್ರೆಗಳಲ್ಲಿ ಮಹಿಳೆಯರು ಮುಖ ಮುಚ್ಚಿಕೊಳ್ಳುವ ಬಟ್ಟೆಧರಿಸದಂತೆ ಭಾಗಶಃ ನಿರ್ಬಂಧ ಹೇರಲಾಗಿದೆ. 2015ರಿಂದ ಈ ಕಾನೂನು ಜಾರಿಯಲ್ಲಿದೆ.

ಇಟಲಿ, ಸ್ಪೇನ್‌

ಇಲ್ಲಿ ಬುರ್ಖಾಗೆ ಸಂಪೂರ್ಣ ನಿಷೇಧ ಇಲ್ಲ. ಆದರೆ 2010ರಲ್ಲಿ ಇಟಲಿಯ ನೊವಾರಾ ಸಿಟಿಯಲ್ಲಿ ಮುಖ ಮುಚ್ಚಿಕೊಳ್ಳುವ ಬಟ್ಟೆನಿಷೇಧಿಸಲಾಗಿದೆ. ಆದರೆ ಉಲ್ಲಂಘನೆಗೆ ಯಾವುದೇ ದಂಡ ಇಲ್ಲ. ಸ್ಪೇನ್‌ನ ಕಾನೂನುಗಳು ಬುರ್ಖಾ ಅಥವಾ ನಿಕಾಬ್‌ಗೆ ವಿರುದ್ಧವಾಗಿವೆ. ಅಲ್ಲಿ ಸುಪ್ರೀಂಕೋರ್ಟ್‌ ಕೆಲ ಪ್ರದೇಶಗಳಲ್ಲಿ ಬುರ್ಖಾವನ್ನು ನಿಷೇಧಿಸಿದೆ. ಚೀನಾದಲ್ಲಿಯೂ ಕೆಲವು ಪ್ರದೇಶಗಳಲ್ಲಿ ನಿಷೇಧವಿದೆ.

ಟಿರ್ಕಿ

ಟರ್ಕಿ ಮುಸ್ಲಿಂ ರಾಷ್ಟ್ರ. 2013ರರ ವರೆಗೂ ಇಲ್ಲಿನ ಕಾನೂನು ಮಹಿಳೆಯರು ಮುಖ ಮುಚ್ಚಿಕೊಳ್ಳುವ ಬಟ್ಟೆಯನ್ನು ನಿಷೇಧಿಸಿತ್ತು. ಆದರೆ ಸದ್ಯ ನ್ಯಾಯಾಂಗ, ಪೊಲೀಸ್‌, ಮಿಲಿಟರಿಯ ಸಮ್ಮತಿಯ ಮೇರೆಗೆ ಮಹಿಳೆಯರು ಎಲ್ಲೆಡೆ ಮುಖ ಮುಚ್ಚಿಕೊಳ್ಳುವ ಬಟ್ಟೆಧರಿಸಬಹುದು.

ಸ್ವಿಜರ್ಲೆಂಡ್‌

2016ರಲ್ಲಿ ಸ್ವಿಜರ್‌ಲೆಂಡ್‌ ಪೂರ್ತಿ ಮುಖ ಮುಚ್ಚುವ ಬಟ್ಟೆಅಥವಾ ನಿಕಾಬ್‌ಅನ್ನು ನಿಷೇಧಿಸಿದೆ. ಈ ನಿಯಮ ಉಲ್ಲಂಘಿಸಿದಲ್ಲಿ 10,000 ಯುರೋ (ಸುಮಾರು 800000 ರು.) ದಂಡ ವಿಧಿಸಲಾಗುತ್ತದೆ.

- ಕೀರ್ತಿ ತೀರ್ಥಹಳ್ಳಿ